ವಿದೇಶಕ್ಕೆ ಹಾರಲು ಮಾಡಾಳ್ ವಿರೂಪಾಕ್ಷಪ್ಪ ಸ್ಕೆಚ್ – ಬಿಜೆಪಿ ಶಾಸಕನ ಬಿಲ ಬಗೆಯಲು ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್!

ವಿದೇಶಕ್ಕೆ ಹಾರಲು ಮಾಡಾಳ್ ವಿರೂಪಾಕ್ಷಪ್ಪ ಸ್ಕೆಚ್ – ಬಿಜೆಪಿ ಶಾಸಕನ ಬಿಲ ಬಗೆಯಲು ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್!

ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಮಗ ಜೈಲುಪಾಲಾಗಿದ್ರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆ ಮರೆಸಿಕೊಂಡಿದ್ದಾರೆ. ಬಂಧನ ಭೀತಿಯಲ್ಲಿರೋ ಬಿಜೆಪಿ ಶಾಸಕ ತೆರೆಮರೆಯಿಂದಲೇ ನಿರೀಕ್ಷಣಾ ಜಾಮೀನು ಪಡೆಯೋಕೆ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ವಿದೇಶಕ್ಕೆ ಹಾರಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ ತನ್ನ ವಿರುದ್ಧ ಭ್ರಷ್ಟಾಚಾರ ವರದಿಯನ್ನ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಇಂಜೆಕ್ಷನ್ ಆರ್ಡರ್ ತರಲು ಮುಂದಾಗಿದ್ದಾರೆ.

ಬಂಧನ ಬೀತಿಯಿಂದ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ವಿರೂಪಾಕ್ಷಪ್ಪ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಿಗೆ ಅವರ ಬಗ್ಗೆ ಮಾಹಿತಿ ರವಾನಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ : ‘ಗುಟ್ಕಾ’ ಬ್ಯಾಗ್​ನಲ್ಲಿ ಹಣ.. ಕಾಂಗ್ರೆಸ್ ಬಾಯಿಗೆ ‘ಮಸಾಲೆ’ – ‘ಕಣಕಣದಲ್ಲೂ ಕೇಸರಿ’ಯಿಂದ ಬಿಜೆಪಿಗೆ ಉರಿಉರಿ!

ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದರೆ ಆರೋಪಿಯು ನ್ಯಾಯಾಲಯ ಅಥವಾ ಪೊಲೀಸರ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ. ವಿದೇಶಕ್ಕೆ ಹೋಗುವ ಅನಿವಾರ್ಯತೆ ಇದ್ದರೆ ಆ ಬಗ್ಗೆ ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ ಬಂಧನವಾಗಿ 4 ದಿನ ಕಳೆದಿವೆ. ಆದರೂ ವಿರೂಪಾಕ್ಷಪ್ಪ ಅವರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ಅಜ್ಞಾತ ಸ್ಥಳಕ್ಕೆ ತೆರಳಿರುವ ಬಿಜೆಪಿ ಶಾಸಕ, ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ. ಶಾಸಕರ ಪತ್ತೆಗೆ ಲೋಕಾಯುಕ್ತ ಡಿವೈಎಸ್​ಪಿಗಳ ನೇತೃತ್ವದಲ್ಲಿ 7 ತಂಡ ರಚಿಸಲಾಗಿದೆ. ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಅಧಿಕಾರಿಗಳ ತಂಡವು ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಶೋಧ ನಡೆಸಿವೆ. ಮತ್ತೊಂದೆಡೆ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ವಿರೂಪಾಕ್ಷಪ್ಪ ಬಂಧನಕ್ಕೆ ಒತ್ತಡ ಹೆಚ್ಚಿದ್ದು, ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲು ಮುಂದಾಗಿದ್ದಾರೆ. ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ವಿರೂಪಾಕ್ಷಪ್ಪ ಅವರ ನಿವಾಸ, ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಕಚೇರಿ, ಶಾಸಕರ ಭವನದ ಕೊಠಡಿಗೆ ನೋಟಿಸ್‌ನ ಪ್ರತಿ ಕಳುಹಿಸಲಾಗುತ್ತದೆ.

ವಿರೂಪಾಕ್ಷಪ್ಪ ಅವರ ಮತ್ತೊಬ್ಬ ಪುತ್ರ ಮಲ್ಲಿಕಾರ್ಜುನ್‌ ಮಾಡಾಳ್‌ ಅವರಿಗೆ ಸೇರಿದ 2 ಕಂಪನಿಗಳ ಬ್ಯಾಂಕ್‌ ಖಾತೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ದಿನವೇ ಮಾರ್ಚ್ 2ರಂದು ಸುಮಾರು 94 ಲಕ್ಷ ರೂ. ವರ್ಗಾವಣೆ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ. ಸಿದ್ದಲಿಂಗೇಶ್ವರ ಮತ್ತು ಸಣ್ಣಗೌಡರ್‌ ಬ್ರದರ್ಸ್‌ ಕಂಪನಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿದೆ. ಮಲ್ಲಿಕಾರ್ಜುನ್‌, ಈ ಎರಡೂ ಕಂಪನಿಗಳ ಪಾಲುದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಣಕ್ಕೆ ಸಂಬಂಧಪಟ್ಟಂತೆ ದಾಖಲೆ ಪತ್ರಗಳ ಸಮೇತ ಸೋಮವಾರ (ಮಾರ್ಚ್ 6) ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಮಲ್ಲಿಕಾರ್ಜುನ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ನಿವಾಸ, ಪ್ರಶಾಂತ್‌ ಕಚೇರಿ ಮತ್ತು ಮನೆಯಲ್ಲಿ ಪತ್ತೆಯಾಗಿರುವ 8.12 ಕೋಟಿ ರೂ., 1.6 ಕೆ.ಜಿ. ಚಿನ್ನಾಭರಣ, ಆಸ್ತಿಯ ದಾಖಲೆಪತ್ರಗಳ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಹಣದ ಮೂಲ, ಆದಾಯ ಮಿತಿಗಿಂತಲೂ ಹೆಚ್ಚಿನ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಪಟ್ಟಂತೆ ವಿರೂಪಾಕ್ಷಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ಪ್ರಶ್ನಾವಳಿ ಸಿದ್ಧಪಡಿಸಲಾಗಿದೆ. ಜತೆಗೆ ಕೆಎಸ್‌ಡಿಎಲ್‌ ನೌಕರರ ಸಂಘದ ಅಧ್ಯಕ್ಷ ಜಿ.ಆರ್‌.ಶಿವಶಂಕರ್‌ ಮಾಡಿರುವ 300 ಕೋಟಿ ರೂ. ಅಕ್ರಮದ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

suddiyaana