ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ! –  ದೆಹಲಿಗೆ ಹೋಗುವುದು ನಿಶ್ಚಿತ, ನಾನಾಗಿಯೇ ಹೋಗಲ್ಲ ಅಂತಾ ಯತ್ನಾಳ್‌ ಹೇಳಿದ್ದೇಕೆ?

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ! –  ದೆಹಲಿಗೆ ಹೋಗುವುದು ನಿಶ್ಚಿತ, ನಾನಾಗಿಯೇ ಹೋಗಲ್ಲ ಅಂತಾ ಯತ್ನಾಳ್‌ ಹೇಳಿದ್ದೇಕೆ?

ರಾಜ್ಯ ಬಿಜೆಪಿಯಲ್ಲಿ ಒಳಜಗಳಗಳು ಭುಗಿಲೆದ್ದಿದೆ. ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಕೆಲ ನಾಯಕರು ಅಸಮಧಾನ ಹೊರಹಾಕುತ್ತಲೇ ಇದ್ದಾರೆ. ಈ ನಾಯಕರುಗಳ ಪೈಕಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಒಬ್ಬರು. ನ್ಯಾಯ ಸಿಗುವವರೆಗೂ ತನ್ನ ಹೋರಾಟ ನಿಲ್ಲಿಸುವುದಿಲ್ಲ ಅಂತಾ ಹೇಳುತ್ತಲೇ ಇದ್ದಾರೆ. ಇದೀಗ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಅವರೊಂದಿಗೆ ಬಸನಗೌಡ ಪಾಟೀಲ್ ಯತ್ನಾಳ್‌ ಕೂಡ ಹೋಗಲಿದ್ದಾರೆ.

ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು, ಆಂಧ್ರಪ್ರದೇಶ ತತ್ತರ – ಸಾವಿನ ಸಂಳ್ಯೆ 17ಕ್ಕೆ ಏರಿಕೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದ್ರೆ ನಾನಾಗಿಯೇ ದೆಹಲಿಗೆ ಹೋಗಲ್ಲ, ಕರೆ ಬಂದ ಮೇಲೆ ಹೋಗುತ್ತೇನೆ. ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ‌ ಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ವಿಪಕ್ಷ ಉಪನಾಯಕನಾಗಿ ಅರವಿಂದ್ ಬೆಲ್ಲದ್ ಆಯ್ಕೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭೆ ವಿಪಕ್ಷ ಉಪನಾಯಕನಿಗೆ ಯಾವ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲಾ ತೀರ್ಮಾನ ವಿಪಕ್ಷ ನಾಯಕ, ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ. ಉಪನಾಯಕ ಅಂದ್ರೆ ವಿಪಕ್ಷ ನಾಯಕನ ಬಳಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ ಅದೇ ರೀತಿ ಕೂರಬೇಕು ಅಷ್ಟೇ. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು

ಇಂದು ಸಿದ್ಧಗಂಗಾ ಮಠದಲ್ಲಿ ಗುರುಭವನ ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೆಲ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಲಿದ್ದಾರೆ. ರಮೇಶ್ ಜಾರಕಿಹೊಳಿ, ವಿ ಸೋಮಣ್ಣ, ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಲ್ ಸಹ ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.  ಸೋಮಣ್ಣ ಹೋಗುವುದು ಖಚಿತವಾಗಿದೆ. ಇನ್ನುಳಿದಂತೆ ಯತ್ನಾಳ್ ಹೈಕಮಾಂಡ್​ನಿಂದ ಕರೆ ಬರುವವರೆಗೂ ದೆಹಲಿ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Shwetha M