ಕಾಶಿಯಾತ್ರೆ ಯೋಜನೆ ಮುಂದುವರೆಸಿದ ಕಾಂಗ್ರೆಸ್ ಸರ್ಕಾರ – ಎಲ್ಲಿಂದ ಹೊರಡಲಿದೆ ನಾಲ್ಕನೇ ಟ್ರಿಪ್?
ಬೆಂಗಳೂರು: ಹಿಂದೂಗಳ ಜೀವನದಲ್ಲಿ ಒಮ್ಮೆಯಾದರೂ ಕಾಶಿಯಲ್ಲಿ ನೆಲೆಸಿರುವ ಮಹಾಶಿವನ ದರ್ಶನ ಪಡೆಯಬೇಕು ಎಂದು ಕನಸು ಕಾಣುತ್ತಾರೆ. ಆದರೆ ಆರ್ಥಿಕವಾಗಿ ದುರ್ಬಲ ಇರುವವರಿಗೆ ಇಲ್ಲಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರ ‘ಕಾಶಿ ಯಾತ್ರಾ ಯೋಜನೆ’ಯನ್ನು ಜಾರಿಗೊಳಿಸಿದೆ. 2022 ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು. ರಾಜ್ಯ ಕಾಂಗ್ರೆಸ್ ಸರ್ಕಾರವು ಕಾಶಿಯಾತ್ರೆ ಯೋಜನೆಯನ್ನು ಮುಂದುವರೆಸಿದ್ದು, ಯೋಜನೆಯ ನಾಲ್ಕನೇ ಟ್ರಿಪ್ಪಿನ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ದ ರೈಲು ಜು.29ರಂದು ಬೆಂಗಳೂರಿನಿಂದ ಹೊರಡಲಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ, ಪುಣ್ಯ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ತೆರಳುವ ಯಾತ್ರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ ಪುನರಾರಂಭಿಸಲಾಗಿದೆ. 2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಐಆರ್‌ಸಿಟಿಸಿ ಮತ್ತು ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಯಾಧಿತ್ರೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್ – ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಬಾಲಾಜಿ ದರ್ಶನಕ್ಕೆ ಸಿಗಲಿದೆ ಹೆಚ್ಚುವರಿ ಟಿಕೆಟ್!
ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ 20 ಸಾವಿರ ರೂ. ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಭರಿಸಲಿದೆ. ಉಳಿದ ಮೊತ್ತವಾದ 15 ಸಾವಿರ ರೂ.ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕು. ಈ ವಿಶೇಷ ರೈಲಿನಲ್ಲಿತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 7 ದಿನಗಳ ಪ್ರವಾಸವಾಗಿರುತ್ತದೆ.
ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್ ಪೂರೈಸಿದ್ದು, ವಿಶೇಷ ರೈಲಿನಲ್ಲಿಒಟ್ಟು 1,644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದಾರೆ. ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ.ಗಳಂತೆ 82.20 ಲಕ್ಷ ರೂ. ಸಹಾಯಧನ ವಿತರಿಸಲಾಗಿದೆ. ಈಗ ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ಜು.29ರಂದು ಬೆಂಗಳೂರಿನಿಂದ ಹೊರಡಲಿದೆ. ರೈಲಿನಲ್ಲಿ ಅಡುಗೆ ಮನೆ ಈಗ ಹೊಸದಾಗಿ ಸುಸಜ್ಜಿತ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರಿಸುವ ಅಡುಗೆ ಮನೆ ಒಳಗೊಂಡಿರುತ್ತದೆ. ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುವರು. ಮಾಹಿತಿಗೆ ಐಆರ್‌ಸಿಟಿಸಿ ವೆಬ್‌ಸೈಟ್ ಭೇಟಿ ನೀಡಬೇಕು. ಸೌಲಭ್ಯವನ್ನು ರಾಜ್ಯದ ಎಲ್ಲಾಭಕ್ತಾದಿಗಳು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಅಥವಾ ಐಆರ್‌ಸಿಟಿಸಿ ಪೋರ್ಟಲ್ ಮೂಲಕ ತಮ್ಮ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ. ಲಿಂಕ್ https://www.irctctourism.com/pacakage_description?packageCode=SZKBG02 ಒಂದು ವಾರ ನಾಲ್ಕು ಸಾವಿರ ಕಿ.ಮೀ ಪ್ರಯಾಣ ಈ ಪ್ರಯಾಣದಲ್ಲಿ 4,161 ಕಿ.ಮೀ ದೂರ ಕ್ರಮಿಸಲಾಗುವುದು. ಈ ರೈಲಿನಲ್ಲಿ (ಭಾರತ್ ಗೌರವ್ ತೀರ್ಥಯಾತ್ರೆ ರೈಲು) ಒಟ್ಟು 14 ಕೋಚ್‌ಗಳು ಇರಲಿದ್ದು, ಈ ಪೈಕಿ 11 ಬೋಗಿಗಳು ಪ್ರಯಾಣಕ್ಕಾಗಿ ಇರುತ್ತವೆ. ಪ್ರತಿ ಕೋಚ್‌ನಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಕಲಾಕೃತಿಗಳನ್ನು ಮಾಡಲಾಗುವುದು. ಜನರ ಪೂಜೆಗಾಗಿ ಬೋಗಿಯನ್ನು ದೇವಸ್ಥಾನವನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಯಾತ್ರಾರ್ಥಿಗಳಿಗೆ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ದೇಗುಲ ಪ್ರವಾಸೋದ್ಯಮವನ್ನು ಹಾಗೂ ಪ್ರಧಾನಿ ಮೋದಿ ಅವರ ದಿವ್ಯ ಕಾಶಿ, ಭವ್ಯ ಕಾಶಿ ಅಭಿಯಾನವನ್ನು ಉತ್ತೇಜಿಸಲು ಕರ್ನಾಟಕದ ಜನರಿಗೆ ಈ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಾಗಿತ್ತು ಎಂದು ಮುಜರಾಯಿ ಅಧಿಕಾರಿಗಳು ಮಾಹಿತಿ ನೀಡಿದರು.