ಬ್ಯಾಂಕ್‌ ಸಿಬ್ಬಂದಿ ಎಡವಟ್ಟಿನಿಂದ ಬೇರೆ ಖಾತೆಗೆ 1,00,000 ಕೋಟಿ ರೂ ವರ್ಗಾವಣೆ! – ಅಷ್ಟೊಂದು ಹಣ ಏನಾಯ್ತು?

ಬ್ಯಾಂಕ್‌ ಸಿಬ್ಬಂದಿ ಎಡವಟ್ಟಿನಿಂದ ಬೇರೆ ಖಾತೆಗೆ 1,00,000 ಕೋಟಿ ರೂ ವರ್ಗಾವಣೆ! – ಅಷ್ಟೊಂದು ಹಣ ಏನಾಯ್ತು?

ಬ್ಯಾಂಕ್‌ಗಳಲ್ಲಿ ಸಣ್ಣಪುಟ್ಟ ಎಡವಟ್ಟುಗಳು ಆಗೋದು ಕಾಮನ್.‌ ಕೆಲವೊಮ್ಮೆ ಗ್ರಾಹಕರಿಂದ ತಪ್ಪು ನಡೆದ್ರೆ, ಇನ್ನೂ ಕೆಲವೊಮ್ಮೆ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ತಪ್ಪಾಗುತ್ತದೆ. ಇದ್ರಿಂದಾಗಿ ಬೇರೆಯವರ ಅಕೌಂಟ್‌ಗೆ ಹಣ ವರ್ಗಾವಣೆಯಾಗುವತ್ತದೆ. ಆದ್ರೀಗ ಕರ್ಣಾಟಕ ಬ್ಯಾಂಕ್‌ ಸಿಬ್ಬಂದಿಯ ಸಣ್ಣ ಅಚಾತುರ್ಯದಿಂದ ಸಂಭವಿಸಿದ ಸಣ್ಣ ತಪ್ಪು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. 1,00,000 ಕೋಟಿ ರೂ. ಹಣ ಬೇರೆ ಅಕೌಂಟ್‌ಗೆ ವರ್ಗಾವಣೆಯಾಗಿದೆ.  ಈ ಘಟನೆ ನಡೆದಿದ್ದು, ಎರಡು ವರ್ಷಗಳ ಹಿಂದೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೈ ಅಂಗಳದಲ್ಲಿ ನವೆಂಬರ್‌ ಕ್ರಾಂತಿ ಕಿಚ್ಚು! – ನ.15ಕ್ಕೆ ಸಿಎಂ, ಡಿಸಿಎಂ ದೆಹಲಿಗೆ ಭೇಟಿ

ಅಷ್ಟಕ್ಕೂ ಆಗಿದ್ದೇನು?

2023ರ ಆಗಸ್ಟ್ 9ರಂದು ಸಂಜೆ 5:17ಕ್ಕೆ ಕರ್ನಾಟಕ ಬ್ಯಾಂಕ್​ನ ಸಿಬ್ಬಂದಿ ಗ್ರಾಹಕರು ಇಟ್ಟಿರುವ ಠೇವಣಿ ಹಣವನ್ನ ಎಸ್​ಬಿ ಖಾತೆಗೆ ವರ್ಗಾವಣೆ ಮಾಡಿದ್ದರು. ಆದ್ರೆ ಸಿಬ್ಬಂದಿಯ ಸಣ್ಣ ಎಡವಟ್ಟಿನಿಂದಾಗಿ 1,04,807 ಕೋಟಿ ರೂ ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಈ ತಪ್ಪು ಕೆಲಹೊತ್ತಲ್ಲೇ ಗೊತ್ತಾಗಿದೆ. ಕೂಡಲೇ ಬ್ಯಾಂಕ್‌ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಆ ಹಣವನ್ನ ವಾಪಸ್ ಪಡೆದಿದ್ದಾರೆ. ಆದ್ರೆ ಇಷ್ಟು ದೊಡ್ಡ ತಪ್ಪಾಗಿದ್ರೂ ಬ್ಯಾಂಕ್‌ ಸಿಬ್ಬಂದಿ ಆರು ತಿಂಗಳ ಕಾಲ ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿಯ ತಂದಿರಲಿಲ್ಲ. ಇದು ಬ್ಯಾಂಕ್‌ ಸಿಬ್ಬಂದಿ ಮೇಲೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿತ್ತು.

ಇನ್ನು ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿಗೆ ವಿಚಾರ ತಿಳಿದರೂ ಈ ಕೇಸ್‌ ತನಿಖೆಗೆ ಮತ್ತಷ್ಟು ಸಮಯ ತೆಗೆದುಕೊಂಡಿದೆ. ಮಂಡಳಿಯು ಈ ಘಟನೆ ಬಗ್ಗೆ ವರದಿ ಸಲ್ಲಿಸಿ, ಪ್ರಮಾಣೀಕೃತ ಲೆಕ್ಕಪರಿಶೋಧಕರಿಂದ ಬ್ಯಾಂಕ್​ನ ಐಟಿ ಸಿಸ್ಟಂಗಳನ್ನು ಆಡಿಟ್ ಮಾಡಿಸಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಮಾಡಿ ಆ ದೋಷವನ್ನು ಸರಿಪಡಿಸಲು ಮತ್ತಷ್ಟು ತಿಂಗಳುಗಳು ತೆಗೆದುಕೊಂಡಿತ್ತು. ಬ್ಯಾಂಕ್​ನ ಆಂತರಿಕ ವ್ಯವಸ್ಥೆ ಬಗ್ಗೆ ಆರ್​ಬಿಐ ಕೂಡ ಆತಂಕಪಟ್ಟಿದೆ. ಬಳಿಕ ಈ ಕೇಸ್‌ಗೆ ಸಂಬಂಧಿಸಿ, ಕರ್ಣಾಟಕ ಬ್ಯಾಂಕ್​ನ ಮ್ಯಾನೇಜ್ಮೆಂಟ್ ನಾಲ್ಕೈದು ಹಿರಿಯ ಅಧಿಕಾರಿಗಳು ದೋಷಿಗಳೆಂದು ಗುರುತಿಸಿ, ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿದೆ.

 1,00,000 ಕೋಟಿ ರೂ ವರ್ಗಾವಣೆ ಆಗಿದ್ದು ಯಾರ ಖಾತೆಗೆ?

ಅಂದ್ಹಾಗೆ ಕರ್ಣಾಟಕ ಬ್ಯಾಂಕ್​ನ ಅದೃಷ್ಟಕ್ಕೆ, ತಪ್ಪಾಗಿ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ. ಡಾರ್ಮಂಟ್ ಅಕೌಂಟ್ ಆಗಿದ್ದರಿಂದ ಸರಿಹೋಯಿತು. ಒಂದು ವೇಳೆ ಸಕ್ರಿಯ ಖಾತೆಯಾಗಿದ್ದು, ಖಾತೆದಾರರು ಹಣವನ್ನು ಏನು ಬೇಕಾದರೂ ಮಾಡಿಕೊಳ್ಳಬಹುದಿತ್ತು. ಈ ಘಟನೆ ಬಗ್ಗೆ ಬ್ಯಾಂಕ್​ನಿಂದ ಅಧಿಕೃತ ಹೇಳಿಕೆ ಬಂದಿಲ್ಲ.

Shwetha M