ಶನಿವಾರ ಕರ್ನಾಟಕದ ಬಂದ್ – ಏನಿರುತ್ತೆ? ಏನಿರಲ್ಲಾ?. ಯಾರೆಲ್ಲಾ ಬೆಂಬಲವಿದೆ?

ಮಾರ್ಚ್ 22 ರ ಶನಿವಾರ ಮಹಾರಾಷ್ಟ್ರದ ಪುಂಡರ ವಿರುದ್ಧ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬೃಹತ್ ಹೋರಾಟ ನಡೆಸುವುದಾಗಿ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಆದರೆ ಈ ಕರ್ನಾಟಕ ಬಂದ್ ಬೆಂಬಲಿಸುವ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿದೆ. ವಾಟಾಳ್ ನಾಗರಾಜ್ ಬಂದ್ ಕರೆಗೆ ಯಾರ್, ಯಾರ ಬೆಂಬಲ ಇದೆ ಅನ್ನೋ ಗೊಂದಲ ಇನ್ನೂ ಮುಂದುವರಿದಿದೆ. ಮಂಗಳವಾರ ಸಭೆ ನಡೆಸಿರುವ ವಾಟಾಳ್ ನಾಗರಾಜ್ ಅವರು ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಖಚಿತ ಎಂದು ಪುನರುಚ್ಚರಿಸಿದ್ದಾರೆ. ಆದರೆ ಹಲವು ಸಂಘಟನೆಗಳು ನೈತಿಕ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ.
ವಾಟಾಳ್ ನಾಗರಾಜ್ ನೇತೃತ್ವದ ಹೋರಾಟಗಾರರು ಸುಮಾರು 2,000 ಸಂಘಟನೆಗಳ ಬೆಂಬಲ ನಮಗೆ ಇದೆ ಎನ್ನುತ್ತಿದ್ದಾರೆ. ಆದರೆ ಸಂಘಟನೆಗಳ ನಾಯಕರಿಂದ ಮಾತ್ರ ಬಂದ್‌ಗೆ ಬೆಂಬಲ ಇದ್ದು, ಸಂಘಟನೆಗಳ ಕಾರ್ಯಕರ್ತರು, ಚಾಲಕರಿಂದ ಬೆಂಬಲ ಇಲ್ಲ ಎನ್ನಲಾಗುತ್ತಿದೆ. ಖಾಸಗಿ ಸಾರಿಗೆ ಒಕ್ಕೂಟ ಬೆಂಬಲ ಇದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಆದ್ರೆ ಅಂದು ಖಾಸಗಿ ಸಾರಿಗೆ ಒಕ್ಕೂಟದ 1 ಲಕ್ಷ ವಾಹನ ಓಡಾಟ ನಡೆಸಲಿದೆ. ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಶನಿವಾರ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೆ ಕನ್ನಡ ಸಂಘಟನೆಗಳ ಮೆರವಣಿಗೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಬಂದ್‌ಗೆ BMTC, KSRTC ನೌಕರರ ಸಂಘ ಬೆಂಬಲ ಸೂಚಿಸಿದೆ. ಆದರೆ ಎಂದಿನಂತೆ ಬಂದ್ ದಿನವೂ ಬಸ್ ಚಲಾಯಿಸುವ ಸಾಧ್ಯತೆ ಇದೆ. ಸಂಘದ ಅಧ್ಯಕ್ಷರು ಮಾತ್ರ ಬಂದ್ ದಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ವಾಟಾಳ್ ನಾಗರಾಜ್ ಅವರ ಕರ್ನಾಟಕ ಬಂದ್‌ಗೆ ಕರವೇ ನಾರಾಯಣಗೌಡರ ಬಣ, ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ ಇಲ್ಲ. ರಾಜ್ಯ ಕಾರ್ಮಿಕ ಪರಿಷತ್ನಿಂದಲೂ ಕರ್ನಾಟಕ ಬಂದ್‌ಗೆ ಬೆಂಬಲ ಇದೆ. ಬಂದ್ ವಿಚಾರದಲ್ಲಿ ಓಲಾ, ಊಬರ್ ಚಾಲಕರಿಂದ ದ್ವಂದ್ವ ನಿಲುವು ಇದೆ. ಹೋಟೆಲ್ ಮಾಲೀಕರ ಅಸೋಸಿಯೇಷನ್ ನಿರ್ಧಾರ ಇನ್ನೂ ಅಂತಿಮ ಆಗಿಲ್ಲ. ಅಂದು ಹೋಟೆಲ್ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಸಾಧ್ಯತೆ ಇದೆ.