ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ – ಹಲವೆಡೆ ಪ್ರತಿಭಟನಾಕಾರರು ಖಾಕಿ ವಶಕ್ಕೆ

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ – ಹಲವೆಡೆ ಪ್ರತಿಭಟನಾಕಾರರು ಖಾಕಿ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ಜನರ ಜೀವನಾಡಿ ಕಾವೇರಿ ನೀರನ್ನು ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರುನಾಡು ಬಂದ್ ಗೆ ಬೆಳಗ್ಗೆಯಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನಾಕಾರರು ರಸ್ತೆಗೆ ಇಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿಯಿಂದಲೇ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ನಗರದ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಾವಲಿಗೆ ಇಳಿದಿದ್ದಾರೆ. ಬೆಂಗಳೂರಿನ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳ ಕೇಂದ್ರ ಭಾಗವಾಗಿರುವ ಕೆಆರ್ ಮಾರುಕಟ್ಟೆಯಲ್ಲಿ ವಿವಿಧ ಸಂಘಟನೆಗಳು ವಿಭಿನ್ನ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ.  ಕಿವಿಗೆ  ಚೆಂಡು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದಕ್ಕೆ ಅಲರ್ಟ್ ಆದ ಪೋಲಿಸರು, ಪ್ರತಿಭಟಿಸಿತ್ತಿದ್ದವರನ್ನ ಕೆಆರ್​ ಮಾರುಕಟ್ಟೆಯಿಂದ ಹೊರ ಕಳುಹಿಸಿದರು.

ಇದನ್ನೂ ಓದಿ: ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿದೆ ಸುರಂಗ ಮಾರ್ಗ – ಕಿ.ಮೀ.ಗೆ 450 ಕೋಟಿ ರೂ. ವೆಚ್ಚ!  

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಮುಂಜಾನೆ ಕಾವೇರಿ ನೀರಿನಲ್ಲಿ ರಾಜ್ಯಕ್ಕೆ ಆದ ಅನ್ಯಾಯ ವಿರೋಧಿಸಿ‌, ಕರ್ನಾಟಕ ಬಂದ್‌ ಬೆಂಬಲಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅರೈವಲ್ ಗೇಟ್ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು. ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಟ್ಟರು. 20ಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಗಡಿಭಾಗದಲ್ಲಿ ತೀವ್ರ ಪ್ರತಿಭಟನೆ

ಅತ್ತಿಬೆಲೆ ಗಡಿಯಲ್ಲಿ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ನೂರಾರು ಮಂದಿ ಜನರಿಂದ ಪ್ರತಿಭಟನಾ ಅತ್ತಿಬೆಲೆ ಟೋಲ್‌ನಿಂದ ಗಡಿ ಗೋಪುರದ ವರೆಗೆ ನಡೆಯಿತು. ಬಂದ್ ಯಶಸ್ವಿಗೊಳಿಸಬೇಕು ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿದರು. ಕನ್ನಡ ಜಾಗೃತಿ ವೇದಿಕೆಯಿಂದಲೂ ಪ್ರತಿಭಟನೆ ನಡೆದಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಅತ್ತಿಬೆಲೆ ಗಡಿಯಲ್ಲಿ ಹೈ ಆಲರ್ಟ್ ವಿಧಿಸಲಾಗಿದ್ದು, ಪೊಲೀಸರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು ನೂರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್​ಗಳು ಸೇರಿದಂತೆ 150 ಜನರನ್ನು ಪೊಲೀಸರು​​ ವಶಕ್ಕೆ ಪಡೆದುಕೊಂಡಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್​​ ವೇಳೆ  ಕಲ್ಲುತೂರಿ, ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್​​ಗೆ ಕರೆ ನೀಡಿದ್ದು, ಇದಕ್ಕೆ ಹೆಚ್ಚಿನ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯ ರೈತ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೆ, ಜನಜೀವನದ ಮೇಲೆ ಪರಿಣಾಮ ಬೀರುವ ಬೀದಿಬದಿ ವ್ಯಾಪಾರ, ಹೊಟೆಲ್ ಸಂಘಟನೆ ಸಹಮತ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

Shwetha M