ಸಿಎಂ ಸಿದ್ಧರಾಮಯ್ಯಗೆ ಅನಾರೋಗ್ಯ – ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಸಿಎಂ ಸಿದ್ಧರಾಮಯ್ಯಗೆ ಅನಾರೋಗ್ಯ – ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಕೆಲ ಮಸೂದೆಗಳ ಬಾಕಿ ಹಿನ್ನೆಲೆಯಲ್ಲಿ ಹಾಗೂ ಸಿಎಂ ಸಿದ್ಧರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಲಾಗಿದೆ.

ಸಭಾಪತಿ ಯು.ಟಿ ಖಾದರ್‌ ಅವರ ನೇತೃತ್ವದಲ್ಲಿ ಶುಕ್ರವಾರ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ ಸೋಮವಾರ (ಫೆ.26) ಒಂದು ದಿನಕ್ಕೆ ವಿಧಾನಸಭೆ ಕಲಾಪ ನಡೆಸುವ ಮತ್ತು ಮಂಗಳವಾರ (ಫೆ.27) ರಾಜ್ಯಸಭಾ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಅಂದು ಕಲಾಪ ನಡೆಯುವುದಿಲ್ಲ.

ಇದನ್ನೂ ಓದಿ: ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ 3-4 ದಿನಗಳಲ್ಲಿ ಕೇಜ್ರಿವಾಲ್ ಅರೆಸ್ಟ್‌! – ಸ್ಪೋಟಕ ಹೇಳಿಕೆ ನೀಡಿದ ದೆಹಲಿ ಸಚಿವೆ

ಇನ್ನು ಸಿಎಂ ಸಿದ್ಧರಾಮಯ್ಯ ಅವರು ಸೋಮವಾರ ಬೆಳಗ್ಗೆ 9:30ಕ್ಕೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ‌ ಸಿಎಂ ಬಸವರಾಜ ಬೊಮ್ಮಾಯಿ, ಸಂಸದೀಯ ವ್ಯವಹಾರಗಳ ಸಚಿವ ಹೆಚ್​.ಕೆ. ಪಾಟೀಲ್ ಸೇರಿದಂತೆ ಇತರೆ ಬಿಎಸಿ ಸದಸ್ಯರು ಭಾಗಿಯಾಗಲಿದ್ದಾರೆ.

ಫೆಬ್ರವರಿ 16ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಎರಡು ದಿನ ನಿರಂತರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಫೆ. 17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ಮಂಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಬಳಿಕ ಫೆ.18ರ ಭಾನುವಾರ ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲೆ ಪ್ರವಾಸ ಕೈಗೊಂಡಿದ್ದರು. ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದ್ದರು.

ಕರ್ನಾಟಕ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.19 ರಂದು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂದು ವಿಶ್ರಾಂತಿಗಾಗಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಿಂದ ಕಾವೇರಿ ನಿವಾಸಕ್ಕೆ ತೆರಳಿದ್ದರು. ಅಂದು ವಿಶ್ರಾಂತಿ ಪಡೆದು, ಮರುದಿನ ಮತ್ತೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆದರೆ ಇಂದು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

3 ಗಂಟೆ 15 ನಿಮಿಷ ಸುದೀರ್ಘ ಬಜೆಟ್ ಭಾಷಣ ಮತ್ತು ಎರಡು ದಿನ ನಿರಂತರ ಜಿಲ್ಲಾ ಪ್ರವಾಸಗಳಲ್ಲಿ ಭಾಷಣ ಮಾಡಿರುವ ಹಿನ್ನೆಲೆ ಸಿದ್ದರಾಮಯ್ಯನವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಹೀಗಾಗಿ ವಿಶ್ರಾಂತಿಯ ಅವಶ್ಯಕತೆ ಇದೆ ಮೂಲಗಳು ಹೇಳುತ್ತಿವೆ.

ವಿಪಕ್ಷ ನಾಯಕರು ಬಾವಿಗಳಿದು ಪ್ರತಿಭಟನೆ – ಸೋಮವಾರಕ್ಕೆ ಸದನ ಮುಂದೂಡಿಕೆ

ಇನ್ನು ಶುಕ್ರವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕರು ಬಾವಿಗಿಳಿದು ಪ್ರತಿಭಟನೆ ಮಾಡಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ಇಂದು (ಫೆ.23) ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ಸಭಾಪತಿಗಳು ಅಧಿವೇಶನವನ್ನು 10 ನಿಮಿಷ ಮುಂದೂಡಿದ್ದರು. ಬಳಿಕ ಮತ್ತೆ ಸದನ ಆರಂಭವಾಗಿದ್ದು, ಈ ವೇಳೆಯೂ ವಿರೋಧ ಪಕ್ಷದ ನಾಯಕರು ಸದನಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

Shwetha M