ಮೋದಿ ನಾಗರ ಹಾವಾದರೆ ಸೋನಿಯಾ ಗಾಂಧಿ ವಿಷಕನ್ಯೆನಾ? – ಖರ್ಗೆ ಹೇಳಿಕೆಗೆ ಯತ್ನಾಳ್ ಟಾಂಗ್
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರದ ಕಾವು ಏರುತ್ತಿದೆ. ಪ್ರಚಾರ ಸಭೆಗಳಲ್ಲಿ ಮಾತಿನ ಅಬ್ಬರ ಜೋರಾಗಿಯೇ ಇದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿನ ಭರದಲ್ಲಿ ‘ಪ್ರಧಾನಿ ಮೋದಿ ವಿಷದ ಹಾವಿದ್ದಂತೆ. ಹೌದೋ ಅಲ್ಲವೋ ಅಂತಾ ನೀವೇನಾದರೂ ನೆಕ್ಕಿ ನೋಡಲು ಹೋದರೆ ಸತ್ತು ಹೋಗುತ್ತೀರಿ ಅಂತಾ ಹೇಳಿದ್ದರು. ಈ ಹೇಳಿಕೆ ವಿರುದ್ದ ಬಿಜೆಪಿ ನಾಯಕರು ಗರಂ ಆಗಿದ್ದು, ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೋದಿ ವಿಷ ಸರ್ಪ ಇದ್ದಂತೆ – ಹೇಳಿಕೆ ನೀಡಿದ ಕೆಲವೇ ಹೊತ್ತಲ್ಲಿ ಯೂಟರ್ನ್ ಹೊಡೆದ ಮಲ್ಲಿಕಾರ್ಜುನ ಖರ್ಗೆ
ಖರ್ಗೆ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಮೋದಿ ನಾಗರ ಹಾವು ಆದ್ರೆ ಸೋನಿಯಾ ಗಾಂಧಿ ಏನು ವಿಷಕನ್ಯೆನಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸೋನಿಯಾ ಗಾಂಧಿ ಅವರನ್ನು ಪಾಕಿಸ್ತಾನದ ಏಜೆಂಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ ಎಂದು ಕರೆದಿದ್ದಾರೆ.
ಯತ್ನಾಳ್ ಸಿದ್ದರಾಮಯ್ಯ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ. ‘ಲಿಂಗಾಯತರನ್ನು ಭ್ರಷ್ಟರು ಅಂತಾರೆ ಸಿದ್ದರಾಮಯ್ಯ, ವೈಯಕ್ತಿಕವಾಗಿ ನಮ್ಮನ್ನು ಅವರು ಬೈಯ್ಯಲಿ, ಇಡೀ ಸಮುದಾಯದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಧಮ್ ಇದ್ದರೆ ಲಿಂಗಾಯತ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿ’ ಎಂದು ಯತ್ನಾಳ್ ಸವಾಲ್ ಹಾಕಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಖರ್ಗೆ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದೆ ಸ್ಥಾನದಲ್ಲಿ ಇಟ್ಟಿದ್ದೆವು. ಆದರೆ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ, ಅವರಿಗೆ ಇಂಥ ದುಸ್ಥಿತಿ ಏಕೆ ಬಂತು ಗೊತ್ತಿಲ್ಲ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಮೆಚ್ಚಿಸಿ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಖರ್ಗೆಯವರಿಗಿಂತ ಕೆಟ್ಟ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಆ ಕೆಲಸ ಮಾಡಲ್ಲ. ನಾನು ಟೀಕೆ ಮಾಡಿ ಆಮೇಲೆ ನಾನು ಹಾಗೆ ಹೇಳಿಲ್ಲ ಎಂದು ಹೇಳುವುದಿಲ್ಲ. ಖರ್ಗೆಯವರಿಗೆ ಒಂದು ತೂಕವಿತ್ತು. ಅದಕ್ಕೆ ಎಐಸಿಸಿ ಅಧ್ಯಕ್ಷರಾದರೂ. ಆದರೆ ಈಗ ಏನಾಗಲು ಹೊರಟಿದ್ದಾರೋ ಗೊತ್ತಿಲ್ಲ. ನರೇಂದ್ರ ಮೋದಿ ಅವರನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ ಎಂದು ಹೇಳಿದ್ದಾರೆ.
ಖರ್ಗೆ ಹೇಳಿಕೆಗೆ ಸಂಸದ ಪ್ರಥಾಪ್ ಸಿಂಹ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕುರಿತು ಖರ್ಗೆ ನೀಡಿದ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಸಂಸತ್ತಿನಲ್ಲೂ ಈ ಹಿಂದೆ ಬಿಜೆಪಿ, ಮೋದಿ ಅವರ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ ಮತಯಾಚನೆ ಮಾಡುತ್ತಿರುವ ಸಂದರ್ಭ ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದರೆ ಸತ್ತು ಹೋಗುತ್ತಾರೆ. ಮೋದಿ ಓರ್ವ ಸುಳ್ಳುಗಾರ. ಕಪ್ಪು ಹಣ ತಂದು 15 ಲಕ್ಷ ಕೊಡುತ್ತೇನೆ ಅಂದರು. ಆದರೆ ಇನ್ನೂ ಕೊಟ್ಟಿಲ್ಲ. ಎಲ್ಲ ಹಣ ಅದಾನಿ ಹತ್ತಿರ ಇಟ್ಟಿದ್ದಾರೇನೋ? 18 ಕೋಟಿ ಯುವಕರಿಗೆ ನೌಕರಿ ಕೊಡಬೇಕಿತ್ತು. ಆದರೆ ಉದ್ಯೋಗ ಕೊಟ್ಟಿಲ್ಲ. ಮೋದಿ ಸುಳ್ಳಿನ ಸರದಾರ ಎಂದು ಹೇಳಿದ್ದರು.