ರಾಜ್ಯದಲ್ಲಿ ಚುನಾವಣಾ ಅಕ್ರಮ – ಇಲ್ಲಿಯವರೆಗೆ ವಶಕ್ಕೆ ಪಡೆದ ಹಣವೆಷ್ಟು ಗೊತ್ತಾ?
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಮತದಾರರ ಮನಗೆಲ್ಲೋಕೆ ಕುಕ್ಕರ್, ಸೀರೆ ಅಂತಾ ಹತ್ತಾರು ಗಿಫ್ಟ್ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲೆಗಳ ಗಡಿಭಾಗಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈಗಾಗ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದುವರೆಗೆ ಪೊಲೀಸರು ಒಟ್ಟು 92 ಕೋಟಿ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಇದು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವಶಪಡಿಸಿಕೊಂಡ ಮೊತ್ತಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗಿಫ್ಟ್ ಕೊಟ್ಟು ಮತಬುಟ್ಟಿಗೆ ‘ಕೈ’ ಹಾಕಿದವ್ರಿಗೆ ಶಾಕ್ – ಹಾಲಿ ಶಾಸಕ ಮತ್ತು ಮಾಜಿ ಶಾಸಕನ ವಿರುದ್ಧ FIR!
ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಒಟ್ಟಾರೆ 88,27,45,176 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ 92,89,23,305 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 50,30,09,107 ಮೌಲ್ಯದ ವಸ್ತುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು, ಜಾರಿ ನಿರ್ದೇಶನಾಲಯ 26.21 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿದ್ದು, ಕಣ್ಗಾವಲು, ಕ್ಷಿಪ್ರಗತಿ ಕ್ರಮ, ಎಚ್ಚರಿಕೆ ಹಾಗೂ ಜನರು ಸಕಾಲದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಇಷ್ಟು ದೊಡ್ಡ ಮಟ್ಟದ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ನಗದು, ಮದ್ಯ, ಮಾದಕ ದ್ರವ್ಯಗಳು, ಲೋಹದ ವಸ್ತುಗಳು, ಉಡುಗೊರೆ ವಸ್ತುಗಳು ಮತ್ತು ಇತರ ಹಲವು ವಸ್ತುಗಳು ಸೇರಿವೆ. ಈ ಕುರಿತು ಪ್ರದೇಶವಾರು ವಿವರಗಳನ್ನು ಕ್ರೋಢೀಕರಿಸುತ್ತಿದ್ದೇವೆ. ಇದರಿಂದ ಮತ್ತಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಬಹುದಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ತಪಾಸಣೆಯನ್ನು ತೀವ್ರಗೊಳಿಸಬೇಕೆಂದು ಭಾರತೀಯ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಇದರಂತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದಾಳಿ ವೇಳೆ ಯಾವುದೇ ರಾಜಕೀಯ ಪಕ್ಷಗಳಿಗೆ ಮಾಹಿತಿಗಳಿರಲಿಲ್ಲ. ದಿಢೀರ್ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.