ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ – ಅದೆಷ್ಟು ಬದಲಾವಣೆ.. ಏನೆಲ್ಲಾ ಅನುಕೂಲ..?
ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಗೊಂದಲದಲ್ಲೇ ನಡೆದಿದ್ದ ಸೆಕೆಂಡ್ ಪಿಯುಸಿ ಪರೀಕ್ಷೆ ಈ ಬಾರಿ ಹಿಂದೆನಂತೆಯೇ ನಡೆಯುತ್ತಿದೆ. ಇವತ್ತಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮಾರ್ಚ್ 29ರವರೆಗೆ ನಡೆಯಲಿದೆ. ಶಿಕ್ಷಣ ಇಲಾಖೆಯಿಂದ ಸಲಕ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
ಎಲ್ಲ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ 7,26,195 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 5,716 ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಆದರೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ.
ಇದನ್ನೂ ಓದಿ : ಕ್ಯಾಂಪಸ್ ನಲ್ಲಿ ಪ್ರತಿಭಟಿಸಿದ್ರೆ ₹20 ಸಾವಿರ ದಂಡ – ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಕಿಂಥಾ ಶಿಕ್ಷೆ?
ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2,373 ವಿಶೇಷ ಜಾಗೃತ ದಳ ನಿಯೊಜನೆ ಮಾಡಲಾಗಿದೆ. ಹಾಗೇ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.ಮಾರ್ಚ್ 29ಕ್ಕೆ ಪರೀಕ್ಷೆಗಳು ಮುಗಿಯಲಿದ್ದು, ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಸುಗಮವಾಗಿ ನಡೆಯಲು, ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಫಲಿತಾಂಶ ಘೋಷಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗ್ಲೇ ಶಿಕ್ಷಣ ಇಲಾಖೆ ಮಾಡಿಕೊಂಡಿದೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಈ ಬಾರಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಯಲ್ಲೂ 1 ಅಂಕದ 20 ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಿದೆ. ಈ ಹಿಂದೆ 5 ಅಥವಾ 6 ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಮೌಲ್ಯಮಾಪನ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಗ್ರೇಸ್ ಮಾರ್ಕ್ಸ್ಗೆ ಸಂಬಂಧಿಸಿಯೂ ತಿದ್ದುಪಡಿ ಮಾಡಲಾಗಿದೆ.
ಮತ್ತೊಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚರಿಸಬಹುದು ಎಂದು ನಿಗಮ ಈಗಾಗಲೇ ತಿಳಿಸಿದೆ. ಮಾರ್ಚ್ 9ರಿಂದ ಮಾರ್ಚ್ 29ರ ವರೆಗೆ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ. ಹಾಗೇ ಬಸ್ ಚಾಲಕರಿಗೆ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳ ಮುಂದೆ ನಿಲುಗಡೆ ನೀಡುವಂತೆ ಸೂಚನೆ ನೀಡಿದೆ.