ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು
ರಿಷಬ್ ಶೆಟ್ಟಿ ನಟನೆಯ ಸೂಪರ್ ಹಿಟ್ ಚಿತ್ರ ‘ಕಾಂತಾರ’ ಸಿನಿಮಾ ಈಗ ಮತ್ತೊಂದು ದಾಖಲೆ ಸೃಷ್ಟಿಸಲು ಸಜ್ಜಾಗುತ್ತಿದೆ. ಕಾಂತಾರ ಚಿತ್ರ ಈಗ ಆಸ್ಕರ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರ’ ಅರ್ಹತೆ ಸುತ್ತನ್ನು ಪಾಸ್ ಮಾಡಿದೆ. ಅಂದರೆ, ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ (Kantara Movie) ಮುಖ್ಯ ನಾಮಿನೇಷನ್ಗೆ ಎಂಟ್ರಿ ಕೊಡಲಿದೆ. 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ‘ಕಾಂತಾರ ಸಿನಿಮಾ ಎರಡು ಆಸ್ಕರ್ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ’ ಎಂದು ಬರೆದುಕೊಂಡಿದೆ. ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾ 100 ದಿನ ಪೂರೈಸಿತ್ತು. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತ್ತು.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಜೊತೆಯಾದ ಜ್ಞಾನವೇಲ್ – 171ನೇ ಚಿತ್ರಕ್ಕೆ ಜೈ ಭೀಮ್ ಖ್ಯಾತಿಯ ನಿರ್ದೇಶಕನಿಂದ ಆ್ಯಕ್ಷನ್ ಕಟ್
ಆಸ್ಕರ್ ಅಕಾಡಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಆಯ್ಕೆಯಾಗಿದೆ. ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.