ಕಾಂತಾರ ಏನೀ ಅವಾಂತರ? ಕಾಡಲ್ಲಿ ಬೆೆಂಕಿ ಅಸಲಿಯತ್ತೇನು?
ಟಾರ್ಗೆಟ್ ಆದ್ರಾ ರಿಷಬ್ ಶೆಟ್ಟಿ?
ಕಾಂತಾರ.. ಕನ್ನಡ ಇಂಡಸ್ಟ್ರೀಯ ಗತ್ತನ್ನ ಇಡೀ ವಿಶ್ವಕ್ಕೆ ಸಾರಿದ ಸಿನಿಮಾ.. ದೈವ ನರ್ತನದ ಮೂಲಕ ಸಿನಿ ರಸಿಕರ ಮನಸ್ಸು ಗೆದ್ದಿದ್ರು ರಿಷಭ್ ಶೆಟ್ರು. ಈಗ ಕಾಂತಾರ 2 ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಆದ್ರೆ ಈ ಟೀಂ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ವಿಘ್ನಗಳು ಕಾಡುತ್ತಲೇ ಇದೆ.. ಈ ಹಿಂದೆ ದೈವ ನರ್ತಕರು ಈ ಸಿನಿಮಾ ಬಗ್ಗೆ ಆಕ್ರೋಶ ಹೊರ ಹಾಕಿದ್ರು.. ದೈವದ ಹೆಸರಲ್ಲಿ ಸಿನಿಮಾ ತೆಗೆದು ದುಡ್ಡು ಮಾಡುತ್ತಿದ್ದಾರೆೆಂದು ಆರೋಪಿಸಿದ್ರು..ಈಗ ರಿಷಭ್ ಶೆಟ್ಟಿ ಟೀಂ ಮೇಲೆ ಅರಣ್ಯ ನಾಶದ ಆರೋಪ ಬಂದಿದೆ.. ಕೆಲ ದಿನಗಳ ಹಿಂದೆ ಯಶ್ ಅಭಿನಯದ ಟಾಕ್ಸಿಕ್ ಚಿತ್ರತಂಡದ ಮೇಲೆ ಇಂತಹ ಆರೋಪ ಕೇಳಿ ಬಂದಿತ್ತು. ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ಆರೋಪ ಕೇಳಿಬಂದಿತ್ತು. ಈಗ ಅಂತದ್ದೇ ಆರೋಪ ಕಾಂತಾರ ಚಿತ್ರ ತಂಡದ ಮೇಲೆ ಕೇಳಿ ಬಂದಿದೆ.
ಇದನ್ನೂ ಓದಿ: ನ್ಯೂಕ್ಲಿಯರ್ ಬಾಂಬ್ ಪವರ್ ಫೈಟ್! – ಸರ್ವನಾಶ ಹತ್ತಿರವಾಯ್ತಾ?
ಹೌದು, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಕಂಡಿದೆ. ಎರಡನೇ ಭಾಗದ ಮೇಲೆ ಕರ್ನಾಟಕ ಮಾತ್ರವಲ್ಲದೆ, ದೇಶದ ಸಿನಿಮಾ ಪ್ರಿಯರ ಗಮನವಿದೆ. ಕಾಂತಾರ ಚಾಪ್ಟರ್ 1 ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಹೀಗಿರುವಾಗಲೇ, ಇದೇ ತಂಡದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿದೆ. ಸದ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸುತ್ತಿದೆ. ಇದೇ ಶೂಟಿಂಗ್ ಸಮಯದಲ್ಲಿ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಈ ತಿಂಗಳ ಆರಂಭದಿಂದಲೂ ಇಲ್ಲಿನ ಹೆರೂರು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿನ ಗೋಮಾಳ ಜಾಗದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ, ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದೆ. ಹೀಗಿರುವಾಗಲೇ ಶೂಟಿಂಗ್ ವೇಳೆ ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಅರಣ್ಯ ಭೂಮಿಗೆ ಬೆಂಕಿ ಹಚ್ಚಿದ್ದಕ್ಕೆ ಹೆರೂರು ಗ್ರಾಮಸ್ಥರು ಚಿತ್ರತಂಡ ಮತ್ತು ಅರಣ್ಯ ಇಲಾಖೆ ನಡೆಯ ವಿರುದ್ಧ ಗರಂ ಆಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಯಾವೆಲ್ಲಾ ಪರವಾನಿಗೆ ನೀಡಿದ್ದಾರೆ ಎಂಬುವುದರ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಬಹಿರಂಗಪಡಿಸಬೇಕು. ಅರಣ್ಯದೊಳಗೆ ಬೆಂಕಿ ಹಾಕುತ್ತಿರುವುದರಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು. ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆದ್ರೆ ಇದು ಅಲ್ಲೇ ಇದ್ದ ಖಾಸಗಿ ಜಮೀನಿನವರ ಕಿರಿಕ್ ಅಂತಾನೇ ಹೇಳಲಾಗುತ್ತಿದೆ. ಒಂದಿಷ್ಟು ಏನಾದ್ರೂ ಸಿಗುತ್ತೆ ಅನ್ನೋ ಕಾರಣಕ್ಕೆ ಚಿತ್ರತಂಡದ ವಿರುದ್ಧ ಸುಖಾಸುಮ್ಮನೆ ಕಿರಿಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕಾಂತಾರ ಚಾಪ್ಟರ್ 1ಕ್ಕೆ ಸರಣಿ ಸಂಕಷ್ಟ
ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇದೇ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ವೇಳೆ ಕೆಲ ಅವಘಡಗಳು ಸಂಭವಿಸಿದ್ದವು. ಶೂಟಿಂಗ್ ಸೆಟ್‌ನಲ್ಲಿ ಜೂನಿಯರ್ ಕಲಾವಿದರಿಗೆ ಸಂಭಾವನೆ ನೀಡದೆ, ಅವ್ಯವಸ್ಥೆಯ ವಸತಿ ಸೌಕರ್ಯದ ಜತೆಗೆ ಊಟ ನೀಡುತ್ತಿಲ್ಲ ಎಂಬ ಆರೋಪ ಹೊಂಬಾಳೆ ಫಿಲ್ಮಂ ವಿರುದ್ಧ ಕೇಳಿಬಂದಿತ್ತು. ಹಾಗೇ ದೈವದ ಹೆಸರಲ್ಲಿ ಸಿನಿಮಾ ಮಾಡಿ ಹಣ ಮಾಡುತ್ತಿದ್ದಾರೆಂದು ದೈವ ನರ್ತಕರು ಆಕ್ರೋಶ ಹೊರ ಹಾಕಿದ್ರು. ಹಾಗೇ ಕಾಂತಾರ ಚಿತ್ರದ ಜೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ 20 ಜನರ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ರಿಷಬ್ ಶೆಟ್ಟಿಯ ಇದೇ ಚಿತ್ರದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಾಯಕ ನಟನಾಗಿಯೂ ಕಾಂತಾರ ಚಾಪ್ಟರ್ 1ರಲ್ಲಿ ನಟಿಸುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ನೂರಾರು ಕೋಟಿಯ ಹೂಡಿಕೆ ಮಾಡುತ್ತಿರುವ ಹೊಂಬಾಳೆ, ಕುಂದಾಪುರದ ಕೆರಾಡಿಯಲ್ಲಿ ಕದಂಬ ಸಾಮ್ರಾಜ್ಯವನ್ನು ಹೋಲುವ ದೊಡ್ಡ ಸೆಟ್ ಹಾಕಿ ಸಿನಿಮಾ ಶೂಟಿಂಗ್ ಆರಂಭಿಸಿದೆ. ಇದೇ ಚಿತ್ರಕ್ಕಾಗಿ ಕೇರಳದ ಕಲರಿಪಯಟ್ಟು ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರೆ ರಿಷಬ್. ಅಂದಹಾಗೆ ಈ ಸಿನಿಮಾ ಇದೇ ವರ್ಷದ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.