ಕಾಂತಾರ ಚಾಪ್ಪರ್ -1 FIRST REVIEW – ರಾಕೇಶ್ ಪೂಜಾರಿ ಇರಬೇಕಿತ್ತು

ಕಾಂತಾರ ಚಾಪ್ಪರ್ -1  FIRST REVIEW  – ರಾಕೇಶ್ ಪೂಜಾರಿ ಇರಬೇಕಿತ್ತು

‘ಕಾಂತಾರ’ ಸಿನಿಮಾದಲ್ಲಿ ಕರಾವಳಿ ಸೊಗಡು, ದೈವಗಳ ಬಗ್ಗೆ ಹೇಳುತ್ತಲೇ ಅಲ್ಲಿನ ಬದುಕನ್ನು ಕಟ್ಟಿಕೊಟ್ಟ ಪರಿ, ಸಿನಿಪ್ರಿಯರನ್ನು ಸೆಳೆದಿತ್ತು ಮತ್ತು ಅದು ಈಗಿನ ಕಾಲಘಟ್ಟದ ಕಥೆಯಾಗಿತ್ತು. ಆದರೆ ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಸುಮಾರು 1500 ವರ್ಷ ಹಿಂದಕ್ಕೆ ಹೋಗಿದ್ದಾರೆ.   ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಮಾಯಾವಿ ಲೋಕವನ್ನು  ರಿಷಬ್ ಶೆಟ್ರು ತೆರೆದಿಟ್ಟಿದ್ದಾರೆ.

ಕಾಂತಾರ -1 ಕಾಡಿನ ಕಥೆ, ಸೇಡಿನ ಕಥೆ

ಕದಂಬರ ಕಾಲದಲ್ಲಿ ಕರಾವಳಿ ಭಾಗದ ಬಾಂಗ್ರಾ ಎಂಬ ಪುಟ್ಟ ಸಾಮಂತ ರಾಜ್ಯ. ಆ ಮನೆತನದ ಅರಸ ಈಶ್ವರನ ಹೂದೋಟ ಕಾಂತಾರದ ಮೇಲೆ ಕಣ್ಣಾಗಿ ಪ್ರಾಣಬಿಡುತ್ತಾನೆ. ಕಾಂತಾರದ ಹೆಸರು ಕೇಳಿದರೆ ರಾಜ ಮನೆತನ ಬೆಚ್ಚಿಬೀಳುತ್ತಿರುತ್ತದೆ. ಆದರೆ ಮುಂದೆ ಆತನ ಮೊಮ್ಮಗ ಕುಲಶೇಖರ – ಗುಲ್ಶನ್ ದೇವಯ್ಯ ಅಲ್ಲಿಗೆ ಹೋಗುತ್ತಾನೆ. ಮುಂದೆ ಕಾಂತಾರದ ರಕ್ಷಕ ಬೆರ್ಮೆ – ರಿಷಬ್ ಶೆಟ್ಟಿ  ಬಾಂಗ್ರಾಗೆ ಕಾಲಿಡುತ್ತಾನೆ. ಅಲ್ಲಿಂದ ಮುಂದೆ ಬಾಂಗ್ರಾ ಹಾಗೂ ಕಾಂತಾರದ ಬುಡಕಟ್ಟು ಜನರ ನಡುವಿನ ಸಂಘರ್ಷ ಹೇಗೆ ನಡೆಯುತ್ತೆ.  ಕಡಪ ದಿಕ್ಕಿನವರ ಮಾಟ ಮತ್ರ ಕಥೆ ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕು.  ಇದೊಂದು ಕಾಡಿನ ಕಥೆ. ಜೊತೆಗೆ ಸೇಡಿನ ಕಥೆ. ಪ್ರಕೃತಿಗೆ ಕೈ ಹಾಕಿದ್ರೆ ದೈವ ಬಿಡಲ್ಲ ಅನ್ನೋ ಕಥೆ..  ಇಲ್ಲಿ ಟ್ರೇಲರ್‌ನಲ್ಲಿ ಕೇಳಿಸಿದ್ದ ಗೂಳಿಗನ ಕಥೆ ಇದೆ, ಹುಲಿಯ ಕಥೆ ಇದೆ. ಈ ಕಥೆಯಲ್ಲಿ ಒಂದು ಅಬ್ಬರವಿದೆ. ಅಷ್ಟೇ ನವಿರಾದ ಹಾಸ್ಯವಿದೆ. ಇಲ್ಲಿ ಬರೋ ಡೈಲಾಗ್‌ಗಳು ಹಾಸ್ಯದ ಉದ್ದೇಶ ಇಲ್ಲದಿದ್ರೂ ಆ ಮಾತು ನಗು ತರಿಸುತ್ತೆ. ಸು ಫ್ರ ಸೋ ನಂತೆ ಹೇಗೆ ಅವರು ಮಾತು ಕೇಳಿದ್ರೆ ನಗು ಬರುತ್ತೆ ಹಾಗೇ ಇಲ್ಲಿ ಕೂಡ ಹಾಸ್ಯ ಇದೆ. ಕನ್ನಡದ ಜೊತೆ ತುಳುನ ಮಿಶ್ರಣವಿದೆ. ತುಳುವಿಗೆ ಹಾಗೂ ದೈವಕ್ಕೆ ಇರೋ ಸಂಬಂಧ ಏನು ಅನ್ನೋದ್ದನ್ನ ತೋರಿಸಲಾಗಿದೆ. ಇನ್ನೂ ಕಾಂತಕದಲ್ಲಿ ರಿಷಭ್ ಮೇಲೆ ದೈವ ಬರೋದು ಎಲ್ಲರೂ ನೋಡಿದ್ರೂ ಇಲ್ಲೂ ಬರುತ್ತೆ ಅಂತ ಎಲ್ಲರಿಗೂ ಗೊತ್ತಿತ್ತು. ಆದ್ರೆ ದೈವ ಬಂದಾಗ  ರಿಷಭ್ ನಟನೆ ಅದ್ಭುತವಾಗಿದೆ. ಇನ್ನೂ ಇಲ್ಲಿ ರಿಷಬ್ ಶೆಟ್ಟಿ ಜೊತೆ ಅವರ ಟೀಂ ಕೈ ಹಿಡಿದಿದೆ. ಬೆರ್ಮೆಯಾಗಿ ರಿಷಬ್ ಆರ್ಭಟ ಮಾಡಿದ್ರೆ, ಒಬ್ಬ ಕೆಟ್ಟ ರಾಜನಾಗಿ  ಗುಲ್ಶನ್ ದೇವಯ್ಯ  ಸಖತ್ ಆ್ಯಕ್ಟಿಂಗ್ ಮಾಡಿದ್ದಾರೆ. ಇವರು ಕೂಡ ನಮ್ಮ ಕನ್ನಡದವರೇ ಅನ್ನೋದು ನಮ್ಮ ಹೆಮ್ಮೆ. ನವೀನ್ ಪಡೀಲ್, ದೀಪಕ್ ಪೈ ಪಾಣಾಜಿ.  ಪ್ರಕಾಶ್ ತುಮಿನಾಡ್, ಪ್ರಮೋದ್ ಶೆಟ್ಟಿ ಅವರವರ ಪಾತ್ರ ಹೇಳಿ ಮಾಡಿಸಿದಂತೆ ಇದೆ.. ಅವರ ಡೈಲಾಗ್ ಆಗಲಿ ಆ್ಯಕ್ಟಿಂಗ್ ಆಗಲಿ ಓವರ್ ಅನ್ಸೋದೆ ಇಲ್ಲ.  ಎಲ್ಲದ್ದಕ್ಕಿಂತ ಬೇಜಾರ್ ಆದ್ರೆ ಇವತ್ತು ರಾಕೇಶ್ ಪೂಜಾರಿ ನಮ್ಮ ಜೊತೆ ಇರಬೇಕಿತ್ತು.. ಅವರು ಈ ಸಿನಿಮಾ  ನೋಡಬೇಕಿತ್ತು.. ಇಡೀ ಸಿನಿಮಾದಲ್ಲಿ ಇವರಿಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ರಿಷಬ್. ಆರಂಭದಿಂದ ಎಂಡ್ ತನಕ ಇವರು ಇರ್ತಾರೆ.. ಅವರ ಅಭಿನಯನ ನೋಡುಗರಿಗೆ ಅಚ್ಚಳಿಯದೇ ಉಳಿಯುತ್ತೆ. ರುಕ್ಮಿಣಿ ವಸಂತ್‌ಗೆ ಒಳ್ಳೆ ಪಾತ್ರ ಸಿಕ್ಕಿದೆ. ಫಸ್ಟ್ ಹಾಫ್ ನೋಡಿದಾಗ ಇಷ್ಟೇನಾ ಅನಿಸುತ್ತದೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಆಕೆಯ ಪಾತ್ರಕ್ಕೆ ದೊಡ್ಡ ಟ್ವಿಸ್ಟ್ ಇದ್ದು ಅದನ್ನು ತೆರೆಮೇಲೆ ನೋಡಬೇಕು. ರಾಜಕುಮಾರಿ ಕನಕವತಿಯಾಗಿ ಸುಂದರವಾಗಿ ಕಾಣುವ ರುಕ್ಮಿಣಿ ಅಷ್ಟೆ ಸೊಗಸಾಗಿ ಪಾತ್ರ ನಿಭಾಯಿಸಿದ್ದಾರೆ.  ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ ನೋಡುತ್ತಿದ್ದರೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟರಮಟ್ಟಿಗೆ ಬೆರ್ಮೆ ಪಾತ್ರವನ್ನು ರಿಷಬ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ಆಕ್ಷನ್ ಸೀನ್ ಬಹಳ ರಿಸ್ಕ್ ತೆಗೆದುಕೊಂಡಿರುವುದು ಗೊತ್ತಾಗುತ್ತದೆ. ಇನ್ನು ಗುಳಿಗ, ಚಾವುಂಡಿ ಸನ್ನಿವೇಶಗಳಲ್ಲಿ ಅಂತೂ ಮೈ ಜುಮ್ ಎನಿಸುವಂತೆ ನಟಿಸಿದ್ದಾರೆ.  ಕಾಮಿಡಿ ಕೂಡ ಚೆನ್ನಾಗಿ ವರ್ಕ್ ಆಗಿದೆ. ಕೊನೆಯಲ್ಲಿ ವಾರ್ ಸೀಕ್ವೆನ್ಸ್ ನಡುವೆ ಕೂಡ ಕಾಮಿಡಿ ತರುವ ಸಾಹಸ ಮಾಡಿದ್ದಾರೆ.

ಒಳ್ಳೆ ಕಥೆ, ಚಿತ್ರಕಥೆ ಬರೆದುಕೊಂಡಿರುವ ರಿಷಬ್ ಶೆಟ್ಟಿ ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತಂದಿದ್ದಾರೆ. ರಿಷಬ್ ಕನಸಿಗೆ ಹೊಂಬಾಳೆ ಸಂಸ್ಥೆ ನೀರಿನಂತೆ ಚೆಲ್ಲಿದೆ. ಅದೆಲ್ಲವೂ ತೆರೆಮೇಲೆ ಕಾಣುತ್ತದೆ. ಕಾಂತಾರದ ಕಥೆ ಹೇಳಲು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಕದಂಬರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಮಸಾಲೆ ಪದಾರ್ಥಗಳ ವ್ಯಾಪಾರದ ವಿಚಾರವನ್ನು ಬಳಸಿಕೊಂಡು ಕರಾವಳಿ ದೈವಗಳ ಹಿನ್ನೆಲೆ ನಂಬಿಕೆಯನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ದೊಡ್ಡದೊಂದು ಟ್ವಿಸ್ಟ್ ಇಟ್ಟು ಇಡೀ ಕಥೆಯ ದಿಕ್ಕನೇ ಬದಲಿಸುತ್ತಾರೆ.ಫ್ರೇಮ್ ಟೂ ಫ್ರೇಮ್ ನೋಡೋ ತರ ಮಾಡುತ್ತೆ. ಕಣ್ಣು ಮುಚ್ಚೋಕೆ ಕೂಡ ಬಿಡಲ್ಲ.

ಹಾಡುಗಳು ಬೇಕಿತ್ತು, BGM ಸೂಪರ್ 

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಅವರ ಸಂಗೀತ ಸಂಯೋಜನೆಯ ಹಾಡುಗಳ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ಸಲ ಅಜನೀಶ್ ಲೋಕನಾಥ್ ಇನ್ನೂ ಬೇರೆಯದ್ದೇನೋ ಕಮಾಲ್ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಕರ್ಮ ಸಾಂಗ್,   ವರಾಹರೂಪಂ ಸಾಂಗ್ ಕೂಡ ಪುನರ್ಬಳಕೆ ಆಗಿದೆ. ಅದು ಒಂಚೂರು ನಿರಾಸೆ ಮಾಡುತ್ತದೆ. ಇದರ ಜೊತೆಗೆ ಇನ್ನೆರಡು ಹಾಡುಗಳಿದ್ದರೂ, ಅಷ್ಟೇನೂ ಗಮನಸೆಳೆಯೋದಿಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲಿ ಈ ಬಾರಿ ಮತ್ತೆ ಮ್ಯಾಜಿಕ್ ಮುಂದುವರಿಸಿದ್ದಾರೆ ಅಜನೀಶ್.  ಕೊನೆಯ 30 ನಿಮಿಷ ಅಜನೀಶ್ ಬಿಜಿಎಂ ಕಿಕ್ ಕೊಡುತ್ತದೆ. ಜಾನಪದ ವಾದ್ಯಗಳನ್ನೇ ಬಳಸಿಕೊಂಡು ಸೊಗಸಾಗಿ ಸಂಗೀತ ಸಂಯೋಜಿಸಿದ್ದಾರೆ.

ಟೆಕ್ನಿಕಲಿ ಗೆದ್ದ ಕಾಂತಾರ ಚಾಪ್ಪರ್  1

ಟೆಕ್ನಿಕಲಿ ‘ಕಾಂತಾರ- 1’ ಸಿನಿಮಾ ಅದ್ಭುತ ಎಂದೇ ಹೇಳಬೇಕು. ಕಾಡನ್ನು ಬಹಳ ಸೊಗಸಾಗಿ ಅರವಿಂದ್ ಕಶ್ಯಪ್ ಕಟ್ಟಿಕೊಟ್ಟಿದ್ದಾರೆ. ಭಾರೀ ಸೆಟ್‌ಗಳನ್ನು ಮಾತ್ರವಲ್ಲ ಲೈವ್ ಲೊಕೇಶನ್‌ಗಳಲ್ಲಿ ಕೂಡ ಅವರ ಛಾಯಾಗ್ರಹಣ ಜಾದೂ ಮಾಡುವಂತಿದೆ.   ಕತ್ತಲು ಬೆಳಕಿನ ಆಟದಲ್ಲಿ ಅರವಿಂದ್ ಕಶ್ಯಪ್ ಗೆದ್ದಿದ್ದಾರೆ. ಜೊತೆಗೆ ಕಲಾ ನಿರ್ದೇಶನ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಊರಿನೊಳಗೆ ರಥ ಹರಿದು ಬರುವ ದೃಶ್ಯ, ಕುದುರೆಯೊಂದು ಮದವೇರಿ ಬೀದಿಯಲ್ಲಿ ಓಡುವ ದೃಶ್ಯ, ಬ್ರಹ್ಮಕಳಶದ ದೃಶ್ಯಗಳ ಮೇಕಿಂಗ್ ಟಾಪ್ ಕ್ವಾಲಿಟಿಯಿಂದ ಕೂಡಿವೆ.ಇನ್ನು ಪ್ರಗತಿ ಶೆಟ್ಟಿ ಬಹಳ ಸೊಗಸಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿ ಗಮನ ಸೆಳೆಯುತ್ತಾರೆ. ಇನ್ನು ನೂರಾರು ಜನರನ್ನು ಬಳಸಿಕೊಂಡು ವಾರ್ ಸೀಕ್ವೆನ್ಸ್ ರೋಚಕವಾಗಿ ಸೆರೆಹಿಡಿಯಲಾಗಿದೆ.  ‘ಕಾಂತಾರ’ ಸಿನಿಮಾವು ಸಿಂಪಲ್ ಮೇಕಿಂಗ್‌ನಿಂದ ಕೂಡಿತ್ತು. ಕಥೆಗೆ ಎಷ್ಟು ಬೇಕೋ ಅಷ್ಟನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಪ್ರೀಕ್ವೇಲ್‌ನಲ್ಲಿ ಅದ್ದೂರಿ ಮೇಕಿಂಗ್‌ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ. ಒಂದಿಡೀ ಊರನ್ನೇ ಸೃಷ್ಟಿ ಮಾಡಲಾಗಿದೆ. ದೇವಸ್ಥಾನ, ಅರಮನೆ ದರ್ಬಾರ್‌ನ ಸೆಟ್‌ಗಳು ಗಮನಸೆಳೆದರೆ, ಈಶ್ವರ ಹೂದೋಟ ಎಂಬ ಕಾಡಿನೊಳಗಿನ ಜಗತ್ತು ಮತ್ತೊಂದು ಮಾಯೆ.

ವಿಎಫ್‌ಎಕ್ಸ್ ನಲ್ಲಿ ಮೋಡಿ

ಸಿನಿಮಾದ ಅದ್ದೂರಿತನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿರುವುದು ವಿಎಫ್‌ಎಕ್ಸ್. ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕಾಗಿ ವಿಎಫ್‌ಎಕ್ಸ್ ತಂಡ ಬಹಳ ಅಚ್ಚುಕಟ್ಟಾದ ಕೆಲಸವನ್ನು ಮಾಡಿದೆ. ಹುಲಿ, ಕಾಡುಪಾಪ, ಕೆಲ ಕಾಡಿನ ದೃಶ್ಯಗಳು ಸೇರಿದಂತೆ ಎಲ್ಲವನ್ನೂ ಕೂಡ ಬಹಳ ಅಮೋಘವಾಗಿ ಕ್ರಿಯೆಟ್ ಮಾಡಿದೆ. ಎಲ್ಲಿಯೂ ಇದು ವಿಎಫ್‌ಎಕ್ಸ್ ಅಂತ ಅನ್ನಿಸೋದೇ ಇಲ್ಲ. ಅಷ್ಟರಮಟ್ಟಿಗೆ ವಿಎಫ್‌ಎಕ್ಸ್ ಟೀಮ್ ಕೆಲಸ ಮಾಡಿದೆ.

ಇನ್ನು 3 ವರ್ಷಗಳ ಹಿಂದೆ ಬಂದಿದ್ದ ‘ಕಾಂತಾರ’ ಚಿತ್ರದಲ್ಲಿ ಬಾವಿಯನ್ನು ತೋರಿಸಿರಲಿಲ್ಲ. ಆ ಬಾವಿ ಮುಚ್ಚಿ ಹೋಗಿದ್ದೇಗೆ? ಎನ್ನುವ ಕಥೆಯನ್ನು ಚಾಪ್ಟರ್‌- 3ನಲ್ಲಿ ರಿಷಬ್ ಶೆಟ್ಟಿ ಹೇಳಲಿದ್ದಾರೆ. ಸದ್ಯ ಪ್ರೀಕ್ವೆಲ್‌ನಲ್ಲಿ ಅದಕ್ಕೆ ಲಿಂಕ್ ಕೂಡ ಕೊಟ್ಟಿದ್ದಾರೆ.

 

Kishor KV