ಕಾಂತಾರ ಚಾಪ್ಟರ್ 1 ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ – ರಿಷಬ್ ಶೆಟ್ಟಿ ಉಗ್ರಾವತಾರದ ಹಿಂದಿದೆ ಬೆಚ್ಚಿ ಬೀಳಿಸೋ ಕಥೆ
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಮೂಡಿ ಬಂದಿದ್ದ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿತ್ತು. ಇದೀಗ ಕಾಂತಾರಾ ಚಾಪ್ಟರ್ 1 ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ನಟ ರಿಷಬ್ ಶೆಟ್ಟಿ ಅವತಾರ ಅಭಿಮಾನಿಗಳ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಅಷ್ಟಕ್ಕೂ ಚಿತ್ರದ ಕಥೆ ಏನು..? ಎಷ್ಟು ಕೋಟಿಯ ಬಜೆಟ್..? ಶೂಟಿಂಗ್ ಯಾವಾಗ..? ಈ ಬಗೆಗಿನ ಕಂಪ್ಲೀಟ್ ಮಾಹಿತಿಯನ್ನ ನೀಡ್ತೇನೆ. ನಾನು ಶಾಂತಾ. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರೀಬೇಡಿ.
ಕಾಂತಾರ ಒಂದು ದಂತಕಥೆ ಎನ್ನುತ್ತಲೇ ಕನ್ನಡ ಚಿತ್ರರಂಗದ ತಾಕತ್ತನ್ನ ಇಡೀ ಜಗತ್ತಿಗೆ ತೋರಿಸಿದ ನಟ ರಿಷಬ್ ಶೆಟ್ಟಿ. ರಿಷಬ್ ಶೆಟ್ಟಿಯವರೇ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿತ್ತು. ಅದೇ ಸಕ್ಸಸ್ ನಲ್ಲೇ ಇದೀಗ ಕಾಂತಾರ ಚಾಪ್ಟರ್ 1 ಚಿತ್ರದ ನಿರ್ಮಾಣಕ್ಕೆ ಚಿತ್ರತಂಡ ಮುಂದಾಗಿದೆ. ನವೆಂಬರ್ 17ರಂದು ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ತಿದೆ. 24 ಗಂಟೆಗಳ ಒಳಗೆ ಟೀಸರ್ 10 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಯಾಕಂದ್ರೆ ರಿಷಬ್ ಶೆಟ್ಟಿಯವರ ಲುಕ್ ನೋಡುಗರ ಮೈ ನವಿರೇಳಿಸುವಂತಿದೆ. ಟೀಸರ್ ನಲ್ಲಿ ರಿಷಬ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಹಿಂದಿನ ಆರ್ಭಟ ಇಲ್ಲೂ ಮರುಕಳಿಸಿದ್ದು, ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಂತಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ. ರಿಷಬ್ ಶಿವನ ಅವತಾರದ ಮತ್ತೊಂದು ರೂಪವಾಗಿ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಕೊಡಲಿ ಹಿಡಿದಿದ್ದು ಕಣ್ಣಲ್ಲಿ ಬೆಂಕಿ ಪ್ರಜ್ವಲಿಸುತ್ತಿದೆ. ಬಾವಿಯೊಳಗೆ ರಿಷಬ್ ಶೆಟ್ಟಿ ಉಗ್ರಸ್ವರೂಪಿಯಾಗಿ ನಿಂತಿದ್ರೆ ಮೇಲೆ ಬೆಂಕಿ ಧಗಧಗಿಸುತ್ತಿದೆ. ಹಾಗೇ ಕಾಂತಾರದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಮ್ಯೂಸಿಕ್ ಈ ಟೀಸರ್ನಲ್ಲೂ ಮೋಡಿ ಮಾಡ್ತಿದೆ.
ಇದನ್ನೂ ಓದಿ : ಕಾಂತಾರ ಸಿನಿಮಾ ಯಶಸ್ಸಿಗೆ ಶ್ರೀವಿನಾಯಕನೇ ಕಾರಣ – ಆನೆಗುಡ್ಡೆ ದೇವರ ಮಹಿಮೆ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?
ಟೀಸರ್ನ ಮತ್ತೊಂದು ವೈಷಿಷ್ಟ್ಯವೆಂದರೆ ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಇರಲಿದೆಯಂತೆ. ಕರಾವಳಿಯ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಚಿತ್ರೀಕರಣ ಕರಾವಳಿ ಭಾಗದಲ್ಲೇ ನಡೆಯಲಿದೆ. ಈಗಾಗಲೇ ಚಿತ್ರದ ಕಲಾವಿದರ ಆಯ್ಕೆ ಕೂಡ ಅಂತಿಮ ಹಂತದಲ್ಲಿದೆ. ಕಾಂತಾರ ಸಕ್ಸಸ್ ಹಿಂದೆ ಕನ್ನಡಿಗರೇ ಇದ್ದ ಕಾರಣ ಕನ್ನಡದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಚಾಪ್ಟರ್ 1 ಗೆ ಈ ಹಿಂದಿನ ತಾಂತ್ರಿಕ ತಂಡವೇ ಮುಂದುವರೆಯಲಿದೆ.
ಇನ್ನು ಕಾಂತಾರ ದೈವದ ಕುರಿತ ಸಿನಿಮಾ ಆಗಿದ್ದರಿಂದ ಚಿತ್ರತಂಡ ಚಾಪ್ಟರ್ 1 ನಿರ್ಮಾಣಕ್ಕೆ ಪಂಜುರ್ಲಿ ಮತ್ತು ಗುಳಿಗ ದೈವಕ್ಕೆ ಮೊರೆ ಹೋಗಿತ್ತು. ದೈವಗಳಿಂದಲೂ ಚಿತ್ರ ನಿರ್ಮಾಣಕ್ಕೆ ಅನುಮತಿ ಸಿಕ್ಕ ಬಳಿಕ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆ ಸಲ್ಲಿಸಿ ಚಿತ್ರದ ಮುಹೂರ್ತ ನೆರವೇರಿಸಿದೆ. ಕಾಂತಾರ ಚಿತ್ರಕ್ಕೆ ಈ ಹಿಂದೆಯೂ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲೇ ಮುಹೂರ್ತ ಮಾಡಲಾಗಿತ್ತು. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾಗೆ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ಕೂಡ ಅಲ್ಲಿಯೇ ಮಾಡಲಾಗಿದೆ. ಪೂಜೆಯಲ್ಲಿ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು ಕೂಡ ಭಾಗಿ ಆಗಿದ್ದರು.
ಈಗಾಗಲೇ ಕನ್ನಡ ಚಿತ್ರರಂಗದ ಪಾಲಿಗೆ ದಂತಕಥೆಯಾಗಿರುವ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬಳಿಕ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ ಈ ಬಾರಿಯ ಕಾಂತಾರ ಪ್ರೀಕ್ವೆಲ್ ಬರೋಬ್ಬರಿ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ವಿಜಯ್ ಕಿರಗಂದೂರು ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ಭಾರೀ ಕುತೂಹಲ ಮೂಡಿಸಿದೆ. ಚಾಪ್ಟರ್ 1 ಚಿತ್ರವನ್ನ ಬಿಗ್ ಬಜೆಟ್ ಮೂಲಕ ನಿರ್ಮಿಸುತ್ತಿರೋದ್ರಿಂದ ಚಿತ್ರ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಕೂಡ ಜಾಸ್ತಿಯಾಗ್ತಿದೆ.