ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್

ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್

ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ. ನಾಲ್ಕನೇ ಟೆಸ್ಟ್‌ಗೆ ಟೀಮ್ ಸೇರಿಕೊಳ್ಳಲಿದ್ದಾರೆ ಎಂದೇ ಹೇಳಲಾಗ್ತಿತ್ತು. ಆದರೀಗ ಕೆ.ಎಲ್ ರಾಹುಲ್ ಅವರು ಸಂಪೂರ್ಣ ಫಿಟ್ ಆಗಿಲ್ಲ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ – ಕುಟುಂಬ ಸಮೇತ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ಕ್ರಿಕೆಟಿಗ

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದಿವೆ. ಈ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಒಂದು ಜಯ ಸಾಧಿಸಿದರೆ, ಭಾರತ ತಂಡ ಎರಡು ಗೆಲುವು ದಾಖಲಿಸಿದೆ. ಇದೀಗ ಫೆಬ್ರವರಿ 23 ರಿಂದ ಶುರುವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಾಹುಲ್ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ 2ನೇ ಮತ್ತು 3ನೇ ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದರೆ, ರಾಂಚಿ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದೇ ಹೇಳಲಾಗ್ತಿತ್ತು. ಆದರೆ, ಕೆ.ಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎನ್ಸಿಎನಲ್ಲಿರುವ ರಾಹುಲ್ ಶೇ.90 ರಷ್ಟು ಫಿಟ್ನೆಸ್ ಸಾಧಿಸಿದ್ದಾರೆ. ಇದಾಗ್ಯೂ ಸಂಪೂರ್ಣ ಫಿಟ್ನೆಸ್ ಹೊಂದದೇ ಕಣಕ್ಕಿಳಿದು ರಿಸ್ಕ್ ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಇನ್ನು ಧರ್ಮಶಾಲಾದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಾರ್ಚ್ 7 ರಿಂದ ಶುರುವಾಗುವ ಅಂತಿಮ ಪಂದ್ಯದ ವೇಳೆ ಅವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಇತ್ತ ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯುತ್ತಿರುವ ಕಾರಣ ಕರ್ನಾಟಕದ ಮತ್ತೋರ್ವ ಆಟಗಾರ ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾದಲ್ಲೇ ಉಳಿಯಲಿದ್ದಾರೆ. ಅಂದರೆ 3ನೇ ಟೆಸ್ಟ್‌ಗೆ ಕೆಎಲ್ಆರ್ ಅಲಭ್ಯರಾಗಿದ್ದ ಕಾರಣ ಬದಲಿ ಆಟಗಾರನಾಗಿ ಪಡಿಕ್ಕಲ್ ಆಯ್ಕೆಯಾಗಿದ್ದರು. ಇದೀಗ ನಾಲ್ಕನೇ ಪಂದ್ಯದಿಂದಲೂ ಕೆಎಲ್ ರಾಹುಲ್ ಹಿಂದೆ ಸರಿದಿರುವ ಕಾರಣ ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಜತ್ ಪಾಟಿದಾರ್ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಿಂದ ರಜತ್ ಪಾಟಿದಾರ್ ಅವರನ್ನು ಕೈ ಬಿಡುವ ಸಾಧ್ಯತೆಯಿದ್ದು, ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಅವಕಾಶ ಸಿಗುವ ನಿರೀಕ್ಷೆಯಿದೆ. ಅದರಂತೆ ರಾಂಚಿ ಟೆಸ್ಟ್ ಪಂದ್ಯದ ಮೂಲಕ DDP ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

Sulekha