GT ಪ್ಲೇಆಫ್ ಎಂಟ್ರಿಗೆ RCB ಅಡ್ಡಗಾಲು – T20 ತಂಡ ಖರೀದಿಸಿದ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್

ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ಗೆ ಎಂಟ್ರಿಕೊಡಲು ಸವಾಲುಗಳೇನು?, ಕೆಕೆಆರ್ ಮತ್ತು ಆರ್ಸಿಬಿ ಪಂದ್ಯವನ್ನು ಎಲ್ ಪ್ರಿಮೆರೋ ಎಂದು ಕರೆಯೋದು ಯಾಕೆ?, ಕನ್ನಡದ ಹೆಮ್ಮೆಯ ಕ್ರಿಕೆಟರ್ ರಾಹುಲ್ ದ್ರಾವಿಡ್ ಈಗ T20 ತಂಡದ ಮಾಲೀಕ.. ಈ ಎಲ್ಲಾ ಸುದ್ದಿಯ ವಿವರ ಇಲ್ಲಿದೆ.
ಇದನ್ನೂ ಓದಿ:GT ಏಟಿಗೆ SRH ಶೇಪ್ ಔಟ್ – ಗುಜರಾತ್ ಪ್ಲೇ ಆಫ್ಸ್ ಪಕ್ಕನಾ?
ಗುಜರಾತ್ ತಂಡ ಸತತ ಗೆಲುವು ಕಾಣುವ ಮೂಲಕ ಪಾಯಿಂಟ್ಸ್ ಟೇಬಲ್ನ ಅಗ್ರಸ್ಥಾನಕ್ಕೇರಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವು ಸಾಧಿಸಿದ ಗಿಲ್ ಪಡೆ 82 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ 16 ಅಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡ ಜಿಟಿ ಪ್ಲೇಆಫ್ ಕನಸು ಕಾಣುತ್ತಿದೆ.
ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡ 16 ಅಂಕ ಗಳಿಸಿದ್ರೂ ಕೂಡಾ ಪ್ಲೇಆಫ್ ಗೆ ಕ್ವಾಲಿಫೈ ಆಗೋದು ಕಷ್ಟ ಎಂದು ಹೇಳಲಾಗ್ತಿದೆ. ಯಾಕೆಂದರೆ, ಜಿಟಿಗೆ ಇನ್ನು 2 ಪಂದ್ಯಗಳು ಬಾಕಿ ಇದ್ದು ಎರಡರಲ್ಲೂ ಗೆಲ್ಲಲೇಬೇಕು. ಯಾಕೆಂದರೆ, RCB ತಂಡ ಗರಿಷ್ಠ 20 ಅಂಕಗಳನ್ನು ಗಳಿಸುವ ಸಾಧ್ಯತೆಯಿದೆ. ಪಂಜಾಬ್ ಕಿಂಗ್ಸ್ ಕೂಡಾ ಗರಿಷ್ಠ 19 ಅಂಕಗಳನ್ನು ಗಳಿಸಬಲ್ಲದು. ಸನ್ರೈಸರ್ಸ್ ಹೈದರಾಬಾದ್, ಸಿಎಸ್ಕೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕೂಡಾ ಗರಿಷ್ಠ 18 ಅಂಕಗಳನ್ನು ಪಡೆಯುವ ಅವಕಾಶ ಹೊಂದಿವೆ.
ಈ ಸೀಸನ್ ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪ್ಲೇ ಆಫ್ಸ್ ರೇಸ್ ನಲ್ಲಿರೋ ಎರಡೂ ತಂಡಗಳಿಗೆ ಮಸ್ಟ್ ವಿನ್ ಮ್ಯಾಚ್ ಆಗಿದೆ. 11 ಪಂದ್ಯಗಳನ್ನ ಆಡಿ 7 ಪಂದ್ಯಗಳನ್ನ ಗೆದ್ದಿರೋ ಬೆಂಗಳೂರು ತಂಡ ಸದ್ಯ ಟಾಪ್-2 ಟಾರ್ಗೆಟ್ ನಲ್ಲಿದೆ. ಮತ್ತೊಂದೆಡೆ ಸತತ 4 ಪಂದ್ಯಗಳನ್ನ ಗೆದ್ದಿರೋ ಕೆಕೆಆರ್ ಟಾಪ್-4 ಮೇಲೆ ಕಣ್ಣಿಟ್ಟಿದೆ.
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಸ್ಪೆಷಲ್ ಪಂದ್ಯ ಎಂದೇ ಕರೆಯಲಾಗುತ್ತದೆ. ಯಾಕಂದ್ರೆ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಇದೇ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ವು. ಅಂದು ಶುರುವಾದ ಉಭಯ ತಂಡಗಳ ಪೈಪೋಟಿ 19ನೇ ಸೀಸನ್ನಲ್ಲೂ ಮುಂದುವರೆದಿದೆ. ಈ ಪೈಪೋಟಿಯನ್ನು ಎಲ್ ಪ್ರಿಮೆರೊ ಎಂದು ಕರೆಯಲಾಗುತ್ತಿದೆ. ಎಲ್ ಪ್ರಿಮೆರೊ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಮೊದಲನೆಯದು ಎಂದರ್ಥ. ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಇದಾದ ಕಾರಣ ಈ ಹೆಸರು ಬಂದಿದೆ.
RCB ಪರ ಮ್ಯಾಚ್-ವಿನ್ನರ್ ಆಗಿ ಮಿಂಚಿದ ಕೃನಾಲ್ ಪಾಂಡ್ಯ, ಟೀಮ್ ಇಂಡಿಯಾಕ್ಕೆ ಮರಳುವ ಆಸೆಯನ್ನು ಬಹಿರಂಗಪಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಕೃನಾಲ್ ಪಾಂಡ್ಯ ಹೇಳಿಕೊಂಡಿದ್ದಾರೆ. ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ. ದೇಶಕ್ಕಾಗಿ ಆಡುವುದು ನನ್ನ ಏಕೈಕ ಗುರಿ. ಏಕದಿನ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವ ವಿಶ್ವಾಸವಿದೆ ಎಂದು ಕೃನಾಲ್ ಹೇಳಿಕೊಂಡಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಜಯ ಸಾಧಿಸಿದೆ. ತಂಡದ ಗೆಲುವಿನ ಬೆನ್ನಲ್ಲೇ ನಾಯಕ ಅಕ್ಷರ್ ಪಟೇಲ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪಂದ್ಯದ ವೇಳೆ ನಿಗದಿತ ಸಮಯಕ್ಕೆ ಓವರ್ಗಳನ್ನು ಪೂರ್ಣಗೊಳಿಸದ ಕಾರಣ ಅಕ್ಷರ್ ಪಟೇಲ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಸೀಸನ್ನಲ್ಲಿ ಡೆಲ್ಲಿ ತಂಡದ ಮೊದಲ ತಪ್ಪಾಗಿದೆ, ಆದ್ದರಿಂದ ಕೇವಲ ನಾಯಕನಿಗೆ ಮಾತ್ರ ದಂಡ ವಿಧಿಸಲಾಗಿದೆ.
ಟಿ20 ಇತಿಹಾಸದಲ್ಲಿ ವೈಭವ್ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಟಿ20ಯಲ್ಲಿ ಅತೀ ವೇಗದಲ್ಲಿ 100 ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ದಾಖಲೆ ಮುರಿದಿದ್ದಾರೆ. ವೈಭವ್ 514 ಎಸೆತದಲ್ಲಿ 100 ಸಿಕ್ಸರ್ ದಾಖಲೆ ಬರೆದರೆ, ಕೀರನ್ ಪೋಲಾರ್ಡ್ 843 ಎಸೆತದಲ್ಲಿ ಈ ಸಾಧನೆ ಮಾಡಿದ್ದರು.
ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಏಕಾಂಗಿಯಾದ್ರಾ?, ಮುಂಬೈ ತಂಡದ ಆಟಗಾರರಿಂದ ದೂರ ಉಳಿಯುತ್ತಿದ್ದಾರಾ? ಈ ಕುತೂಹಲಕ್ಕೆ ಕಾರಣ ಪಾಂಡ್ಯ ಏಕಾಂಗಿಯಾಗಿ ಮಾಡುತ್ತಿರೋ ಪ್ರಾಕ್ಟೀಸ್. ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಏಕಾಂಗಿಯಾಗಿ ಅಭ್ಯಾಸ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ.
ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಟಿ20 ತಂಡದ ಮಾಲೀಕರಾಗಿದ್ದಾರೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ರಾಹುಲ್ ದ್ರಾವಿಡ್ ‘ಡಬ್ಲಿನ್ ಗಾರ್ಡಿಯನ್ಸ್’ ತಂಡದ ಮಾಲೀಕರಾಗಲಿದ್ದಾರೆ. ಆ ತಂಡಕ್ಕೆ ಅಶ್ವಿನ್ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅಶ್ವಿನ್ಗೆ ನಾಯಕತ್ವದ ಜೊತೆಗೆ ತಂಡವನ್ನು ಕಟ್ಟಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ, ವಿರಾಟ್ ಕೊಹ್ಲಿ ಜರ್ಮನ್ ರೀಲ್ ತಾರೆ, ಮಾಡೆಲ್ ಲಿಜ್ಲಾಜ್ ಅವರ ಇನ್ಸ್ಟಾಗ್ರಾಮ್ ರೀಲ್ ಅನ್ನು ಲೈಕ್ ಮಾಡಿದ್ದರು. ಅದಾದ ನಂತರ, ಲಿಜ್ಲಾಜ್ ರಾತ್ರೋರಾತ್ರಿ ಸ್ಟಾರ್ ಆದರು. ಇದೀಗ ಲಿಜ್ಲಾಜ್ ಆಘಾತಕಾರಿ ಸಂಗತಿಯೊಂದನ್ನ ಬಹಿರಂಗಪಡಿಸಿದ್ದಾರೆ. ಕೆಲವರು ಕೊಹ್ಲಿ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಹಣದ ಆಫರ್ ನೀಡಿದ್ದರು. ಆದರೆ, ಆ ಆಫರ್ಗಳನ್ನು ನಿರಾಕರಿಸಿದ್ದಾಗಿ ಲಿಜ್ಲಾಜ್ ತಿಳಿಸಿದ್ದಾರೆ.

ನೋಡಿರಿ

