ಕರ್ತವ್ಯಪಥದಲ್ಲಿ ನೌಕಾದಳ ಮುನ್ನಡೆಸಲಿದ್ದಾರೆ ಕನ್ನಡತಿ – ಗಣರಾಜ್ಯೋತ್ಸವದಲ್ಲಿ ಅದೆಷ್ಟು ವಿಶೇಷತೆ..?

ಕರ್ತವ್ಯಪಥದಲ್ಲಿ ನೌಕಾದಳ ಮುನ್ನಡೆಸಲಿದ್ದಾರೆ ಕನ್ನಡತಿ – ಗಣರಾಜ್ಯೋತ್ಸವದಲ್ಲಿ ಅದೆಷ್ಟು ವಿಶೇಷತೆ..?

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಈ ಸಲ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಲಿದೆ. ಗಣರಾಜ್ಯೋತ್ಸವ ಪರೇಡ್​ನ ಕರ್ತವ್ಯಪಥದಲ್ಲಿ ನೌಕಾದಳವನ್ನು ಕನ್ನಡತಿ ದಿಶಾ ಅಮೃತ್ ಮುನ್ನಡೆಸಲಿದ್ದಾರೆ. ಜನವರಿ 26 ರಂದು ದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾಪಡೆಗಳ ಪಥ ಸಂಚಲನದಲ್ಲಿ ನೌಕಾಪಡೆ ತುಕಡಿಯನ್ನು ಮಂಗಳೂರಿನ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ಕುರ್ಚಿ ತರಲು ಲೇಟ್ ಆಗಿದ್ದಕ್ಕೆ ರೊಚ್ಚಿಗೆದ್ದ ಸಚಿವ – ಕಾರ್ಯಕರ್ತರ ಮೇಲೆ ಕಲ್ಲೆಸೆದು ದರ್ಪ!

ರಾಜಪಥ್​ಗೆ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿದ ನಂತರ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದೆ. ಅಂಡಮಾನ್ ನಿಕೋಬಾರ್ ಕಾರ್ಯ ನಿರ್ವಹಿಸುತ್ತಿರುವ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿ ಆಗಿರುವ 29 ವರ್ಷದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ನೌಕಾಪಡೆಯ ವಿಭಾಗವನ್ನು ಮುನ್ನಡೆಸಲಿದ್ದಾರೆ. ಒಟ್ಟು 144 ಸದಸ್ಯರ ಯುವ ನಾವಿಕರ ತಂಡವನ್ನು ದಿವ್ಯಾ ಅಮೃತ್ ಮುನ್ನಡೆಸಲಿದ್ದು, ಇದರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರು ಅಗ್ನಿವೀರರಾಗಿ ತರಬೇತಿ ಪಡೆಯುತ್ತಿದ್ದಾರೆ. ಮತ್ತೊಬ್ಬ ಮಹಿಳಾ ಅಧಿಕಾರಿ ಸಬ್ –ಲೆಫ್ಟಿನೆಂಟ್ ಎಸ್. ವಲ್ಲಿ ಮೀನಾ ಮೂರು ದಳದ ಕಮಾಂಡರ್​ಗಳಲ್ಲಿ ಒಬ್ಬರಾಗಿರುತ್ತಾರೆ.

ಪರೇಡ್​ನಲ್ಲಿ ಭಾಗಿಯಾಗಲಿರುವ ನೌಕಾದಳದ ಸ್ತಬ್ಧಚಿತ್ರವು ‘ನಾರಿಶಕ್ತಿ’ ಥೀಮ್ ಹೊಂದಿದೆ. ಮೇಕ್ ಇನ್ ಇಂಡಿಯಾದ ಯೋಜನೆಯಡಿ ತಯಾರಿಸಿದ ಸ್ಕಾರ್ಪೀನ್, ಕಲ್ವರಿ ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ನೌಕಾಪಡೆಯ ಬಹು ಆಯಾಮದ ಸಾಹಸ ಪರೇಡ್​ನಲ್ಲಿ ಪ್ರದರ್ಶನಗೊಳ್ಳಲಿದೆ.  ‘ನಾನು ಪುರುಷ ಸಹೋದ್ಯೋಗಿಗಳಷ್ಟೇ ಸಮನಾಗಿದ್ದೇನೆ. ಅದನ್ನು ಸಾಬೀತು ಕೂಡ ಮಾಡಿದ್ದೇನೆ. ನೌಕಾಪಡೆಯ ಕವಾಯತು ತಂಡವನ್ನು ಮುನ್ನಡೆಸುವುದು ನನ್ನ ಜೀವಮಾನದ ಅದ್ಭುತ ಅವಕಾಶ’ ಎಂದು ದಿಶಾ ಹೇಳಿದ್ದಾರೆ. ಡಾ. ಅಶ್ವತ್ಥ ನಾರಾಯಣ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ದಿಶಾ ಅಮೃತ್ ಮಂಗಳೂರಿನ ಬೋಳೂರಿನ ತಿಲಕ್​ ನಗರದ ನಿವಾಸಿಯಾಗಿದ್ದು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಅಮೃತ್​ಕುಮಾರ್ ಮತ್ತು ತಾಯಿ ಲೀಲಾ. ಬಾಲ್ಯದಿಂದಲೇ ನೌಕಾಪಡೆಯ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದ ದಿಶಾ, ಶಾಲೆಯಲ್ಲಿ ಕಲಿಯುತ್ತಿರುವಾಗಲೇ ದೆಹಲಿಯ ಗಣರಾಜ್ಯೋತ್ಸವ ಪರೇಡ್​ಗೆ ಆಯ್ಕೆಯಾಗಿದ್ದರು.  ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ನೌಕಾಪಡೆಗೆ ಸೇರಿದ ದಿಶಾ, 2017ರಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

suddiyaana