ರಂಗಭೂಮಿ ಹಾಗೂ ಕಿರುತೆರೆಯ ಭರವಸೆಯ ನಟ ಸೂ*ಸೈಡ್ – ಮುರಳಿ ಸಾವಿನ ಸುತ್ತ ಅನುಮಾನದ ಹುತ್ತ

ರಂಗಭೂಮಿ ಹಾಗೂ ಕಿರುತೆರೆಯ ಭರವಸೆಯ ನಟ ಸೂ*ಸೈಡ್ – ಮುರಳಿ ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರಿನಲ್ಲಿ ಉದಯೋನ್ಮುಖ ರಂಗಭೂಮಿ ಹಾಗೂ ಕಿರುತೆರೆಯ ಭರವಸೆಯ ನಟರಾಗಿದ್ದ ಮುರಳಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಸಾರಕ್ಕಿ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಅವರ ಆಪ್ತರಿಗೆ, ಸ್ನೇಹಿತರಿಗೆ ಆಘಾತವನ್ನು ಉಂಟುಮಾಡಿದೆ.

ಇದನ್ನೂ ಓದಿ: KSCAಯಿಂದ ಚಿನ್ನಸ್ವಾಮಿ ರಿನೋವೇಷನ್ – 20 ಸಾವಿರ ಸೀಟ್ ಹೆಚ್ಚಳಕ್ಕೆ ಪ್ಲ್ಯಾನ್

ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಮುರಳಿ, ಕಳೆದ ಹಲವು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕೇವಲ ನಾಟಕಗಳಷ್ಟೇ ಅಲ್ಲದೆ, ಕಿರುಚಿತ್ರಗಳಲ್ಲಿಯೂ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದರು. ಆದರೆ ಅವರು ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವನ್ನು ಉಂಟು ಮಾಡಿದೆ. ಇಂದು ಸಾರಕ್ಕಿ ಬಳಿ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಜೆ.ಪಿ. ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ತನಿಖೆ ಕೈಗೊಂಡಿದ್ದಾರೆ.

ಅತ್ಯಂತ ಉತ್ಸಾಹಭರಿತ ವ್ಯಕ್ತಿತ್ವದ ಮುರಳಿ ಅವರ ಈ ಹಠಾತ್ ನಿರ್ಧಾರಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ. ವೃತ್ತಿಜೀವನದ ಸಂಕಷ್ಟವೋ ಅಥವಾ ವೈಯಕ್ತಿಕ ಸಮಸ್ಯೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಮುರಳಿ ಆತ್ಮಹತ್ಯೆ ಬಗ್ಗೆ ಸ್ನೇಹಿತರು ಹಾಗೂ ಸಹ ಕಲಾವಿದರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತದೇಹದ ಬಳಿ ಯಾವುದೇ ಡೆತ್‌ನೋಟ್ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಮುರಳಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಂಗಭೂಮಿ ಕಲಾವಿದರು ಕಂಬನಿ ಮಿಡಿದಿದ್ದಾರೆ.

Kishor KV