ದಿಲೀಪ್ ರಾಜ್ ಮುದ್ದಾದ ಸಂಸಾರದ ಮೇಲೆ ವಿಧಿಯ ಕಣ್ಣು – ವೃತ್ತಿ ಬದುಕು, ವೈಯಕ್ತಿಕ ಬದುಕಿನಲ್ಲೂ ಮಾದರಿ ಎಜೆ ದಂಪತಿ

ಪ್ರೀತಿಯಿಂದ ವರಿಸಿದ ಹೆಂಡತಿ, ಮುದ್ದಾದ ಇಬ್ಬರು ಹೆಣ್ಣುಮಕ್ಕಳು, ಕಿರುತೆರೆಯಲ್ಲಿ ಬಿಡುವಿಲ್ಲದಷ್ಟು ಸೀರಿಯಲ್ ಕೆಲಸ, ಸಿನಿಮಾರಂಗದಲ್ಲೂ ನಟನೆ, ನ್ಯತ್ಯದಲ್ಲೂ ಸೈ, ಹಾಡಿಗೂ ಜೈ, ಹಲವು ಪ್ರತಿಭೆಗಳ ಆಗರವಾಗಿದ್ದರು ದಿಲೀಪ್ ರಾಜ್.. ಈ ಸುಂದರ ಸಂಸಾರದ ಮೇಲೆ ವಿಧಿಯ ಕ್ರೂರ ದೃಷ್ಟಿ ಯಾಕಾದರೂ ಬಿತ್ತೋ. ಗಂಡನನ್ನು ಕಳೆದುಕೊಂಡ ಪತ್ನಿ ಆಘಾತದಲ್ಲಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಅಪ್ಪನ ಅಗಲಿಕೆಯನ್ನು ಸಹಿಸಲಾಗದೇ ನೋವಿನಲ್ಲಿದ್ದಾರೆ. ಇನ್ನು ದಿಲೀಪ್ ರಾಜ್ ನಂಬಿಕೊಂಡಿದ್ದ ಅದೆಷ್ಟೋ ತಂತ್ರಜ್ಞರು, ಸಿಬ್ಬಂದಿ ಮೌನವಾಗಿದ್ದಾರೆ.
ಇದನ್ನೂ ಓದಿ:ನಟ, ನಿರ್ಮಾಪಕ ದಿಲೀಪ್ ರಾಜ್ ಇನ್ನಿಲ್ಲ – ಕನ್ನಡ ಕಿರುತೆರೆಗೆ ದೊಡ್ಡ ಆಘಾತ
ಕನ್ನಡ ಕಿರುತೆರೆಯ ಮಾದರಿ ದಂಪತಿ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಅನ್ನೋದೇ ಕಲಾವಿದರಿಗೆ ಹೆಮ್ಮೆ. ದಿಲೀಪ್ ರಾಜ್ ಮತ್ತು ಅವರ ಪತ್ನಿ ಬಾಂಧವ್ಯ ಕೇವಲ ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವೃತ್ತಿಜೀವನದಲ್ಲೂ ಈ ಜೋಡಿ ಅದ್ಭುತ ಸೀರಿಯಲ್ಗಳನ್ನು ಕನ್ನಡ ಜನತೆಗೆ ನೀಡಿದ್ದರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆಯನ್ನು ಆರಂಭಿಸಿದರು. ಶ್ರೀವಿದ್ಯಾ ಅವರು ನಿರ್ಮಾಣದ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ದಿಲೀಪ್ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಈ ಜೋಡಿಯ ಕಠಿಣ ಪರಿಶ್ರಮದ ಫಲವಾಗಿ ಕನ್ನಡ ಕಿರುತೆರೆಗೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳು ತೆರೆ ಕಂಡಿದ್ದವು.
ಇನ್ನು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರದ್ದು ಪ್ರೇಮವಿವಾಹ. ಶ್ರೀವಿದ್ಯಾ ಮತ್ತು ದಿಲೀಪ್ ರಾಜ್ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು ಸ್ನೇಹಿತರಾಗಿ, ಪ್ರೇಮಿಗಳಾಗಿ, ಸತಿ ಪತಿಗಳಾಗಿ ಇತರರಿಗೂ ಸ್ಪೂರ್ತಿಯಾಗಿದ್ದರು. ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ಧೃತಿ ಮತ್ತು ಅದಿತಿ. ಕುಟುಂಬದೊಂದಿಗೆ ಸಮಯ ಕಳೆಯುವುದು ದಿಲೀಪ್ ರಾಜ್ಗೆ ತುಂಬಾ ಇಷ್ಟ. ಫ್ಯಾಮಿಲಿ ಜೊತೆ ಪ್ರವಾಸ ಹೋಗುವುದು ತುಂಬಾ ಇಷ್ಟ. ನನ್ನ ಕುಟುಂಬ ನನ್ನ ಪ್ರಾಣ ಎಂದು ಹೇಳುತ್ತಿದ್ದ ದಿಲೀಪ್ ರಾಜ್ ಈಗ ಪತ್ನಿ, ಮತ್ತು ಮಕ್ಕಳನ್ನು ಅರ್ಧದಲ್ಲೇ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇನ್ನು ದಿಲೀಪ್ ರಾಜ್ ಮತ್ತು ಶ್ರೀ ವಿದ್ಯಾ ದಂಪತಿ ಪಾರು ಹಾಗೂ ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿಗಳ ನಿರ್ಮಾಣ ಮಾಡಿದ್ದರು. ಹಿಟ್ಲರ್ ಕಲ್ಯಾಣ ಇವರದ್ದೇ ನಿರ್ಮಾಣದಲ್ಲಿ ಮೂಡಿಬಂದಿತ್ತು. ಇದರಲ್ಲಿ ದಿಲೀಪ್ ರಾಜ್ ಹಿಟ್ಲರ್ ಎಜೆ ಆಗಿ ಕನ್ನಡ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು. ತೆರೆ ಮುಂದೆ ದಿಲೀಪ್ ಕಾಣಿಸಿಕೊಂಡಿದ್ದರೆ, ತೆರೆ ಹಿಂದೆ ಶ್ರೀವಿದ್ಯಾ ಶ್ರಮ ಮರೆಯುವಂತಿಲ್ಲ. ಸದಾ ನಗುಮುಖದಿಂದ ಕೆಲಸ ಮಾಡುತ್ತಿದ್ದ ಈ ಜೋಡಿ, ನೂರಾರು ತಂತ್ರಜ್ಞರಿಗೆ ಬದುಕು ನೀಡಿದ್ದರು. ಇಂದು ದಿಲೀಪ್ ರಾಜ್ ತನ್ನ ಮುದ್ದಿನ ಮಡದಿ, ಮಕ್ಕಳನ್ನು ಅಗಲಿದ್ದಾರೆ. ಆದರೆ, ಅವರು ಪತ್ನಿಯೊಂದಿಗೆ ಸೇರಿ ಕಟ್ಟಿದ ಈ ಕಲಾ ಸಾಮ್ರಾಜ್ಯ ಮತ್ತು ಅವರು ನೀಡಿದ ಅದ್ಭುತ ಧಾರಾವಾಹಿಗಳು ಸದಾ ಕನ್ನಡಿಗರ ಮನಸಿನಲ್ಲಿ ಉಳಿಯುತ್ತದೆ.

ನೋಡಿರಿ

