ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು! – ರಾಮ ಪ್ರಾಣಪ್ರತಿಷ್ಠೆ ವೇಳೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ!

ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು! – ರಾಮ ಪ್ರಾಣಪ್ರತಿಷ್ಠೆ ವೇಳೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಪ್ರಸಾರ!

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶ, ವಿದೇಶಗಳಿಂದ ಕಾಣಿಕೆಗಳು ಹರಿದುಬರುತ್ತಿದೆ. ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕರ್ನಾಟಕದ ಜನತೆ ಖುಷಿಪಡುವ ಸುದ್ದಿಯೊಂದು ಹೊರಬಿದ್ದಿದೆ. ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಅಯೋಧ್ಯೆಯಲ್ಲಿ ಕನ್ನಡದ ಹಾಡು ಮೊಳಗಲಿದೆ.

ಇದನ್ನೂ ಓದಿ: ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?

ಹೌದು, ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಲೋಕಾರ್ಪಣೆ ವೇಳೆ ಕನ್ನಡದ ಹಾಡು ಮೊಳಗಲಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ   ವಾಸವಾಗಿರುವ ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ.

ಈ ಕುರಿತು ಅಯೋಧ್ಯೆ  ಟ್ರಸ್ಟ್ ಎಕ್ಸ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ಈ ಕುರಿತು ಡಾ.ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದು, ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್‌ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು.

ದಿಲ್ ಮಾಂಗೆ ಮೋರ್ ಟೈಟಲ್ ಪ್ರೇರಣೆಯಿಂದ ಹುಟ್ಟಿತು ಹಾಡು!

ಡಾ.ಗಜಾನನ ಶರ್ಮಾರವರಿಗೆ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಕಥೆಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆ ಮಾಡಿಕೊಡುವಂತೆ ಹೇಳಿದ್ದರು. ಆದರೆ ಶರ್ಮರವರ ಕಾರ್ಯ ಒತ್ತಡದಿಂದ ರಚನೆ ಮಾಡಲಾಗಿರಲಿಲ್ಲ. ಒಮ್ಮೆ ಇವರು ಕಾರ್ಯ ನಿಮಿತ್ತ ಕೇರಳಕ್ಕೆ ಹೋದಾಗ ತಂಪು ಪಾನಿಯದ ಜಾಹಿರಾತಿನಲ್ಲಿ ದಿಲ್ ಮಾಂಗೆ ಮೋರ್ ಎಂದು ಬರೆದಿದ್ದನ್ನು ಓದಿದ ಇವರಿಗೆ ಈ ಟೈಟಲ್ ರಾಮನ ಕುರಿತು ಯಾಕಾಗಬಾರದು ಎಂದು ಅವರು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂದು ಗೀತೆ ರಚಿಸಿದರು. ಈ ರಚನೆಯನ್ನು ಶ್ರೀಗಳಿಗೆ ತೋರಿಸಿದಾಗ ಅದನ್ನು ಮುಂದುವರೆಸಲು ಹೇಳಿದರು. ಹೀಗೆ ಈ ಗೀತೆ ರಚನೆಯಾಯ್ತು ಎಂದು ಅದರ ಮೂಲವನ್ನು ಶರ್ಮಾರವರು ತಿಳಿಸಿದ್ದಾರೆ.

ಡಾ.ಗಜಾನನ ಶರ್ಮಾರವರು ರಾಮಕಥೆ ಮೂಲಕವೇ ಇಡೀ ದೇಶಕ್ಕೆ ಪರಿಚಿತರಾಗಿದ್ದಾರೆ. ಇವರು ರಚಿಸಿದ ಗೀತೆಗಳು ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಇದೀಗ ರಾಮನ ಸನ್ನಿಧಿಯಲ್ಲೇ ಅದರಲ್ಲೂ ಕನ್ನಡ ಭಾಷೆಯಲ್ಲಿ ಈ ಗೀತೆ ಪ್ರಸ್ತುತ ಪಡಿಸುತ್ತಿರುವುದು ಕನ್ನಡಿಗರ ಹೆಮ್ಮೆ ಎನಿಸಿದೆ.

Shwetha M