ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ – ಮರುಪರೀಕ್ಷೆಗೆ ಹೈಕೋರ್ಟ್ ಆದೇಶ

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ – ಮರುಪರೀಕ್ಷೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಸರ್ಕಾರದ ಆದೇಶ ಎತ್ತಿ ಹಿಡಿದಿದೆ. ಪಿಎಸ್ಐ 545 ಹುದ್ದೆಗಳಿಗೆ ಮರುಪರೀಕ್ಷೆಗೆ ಹೈಕೋರ್ಟ್ ಆದೇಶ ನೀಡಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಬಳಿಕ ತನಿಖೆಯ ವೇಳೆ ಪರೀಕ್ಷಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆಡಿಯೋ ಸಹ ವೈರಲ್ ಆಗಿತ್ತು. ಇದಾದ ಬಳಿಕ ಈ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಸರ್ಕಾರ ಪಿಎಸ್‌ಐ ಲಿಖಿತ ಪರೀಕ್ಷೆಯನ್ನೇ ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರ ಅದೇಶ ಪ್ರಕಟಿಸಿತ್ತು. ಸರ್ಕಾರ ಹೊಸದಾಗಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಕರ್ನಾಟಕ ಹೈಕೋರ್ಟ್‌ ಮರುಪರೀಕ್ಷೆ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್​​ ವಜಾಗೊಳಿಸಿದೆ. ಅಷ್ಟೇ ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ; ಜೀವ ಉಳಿಸಿಕೊಳ್ಳಲು ಸತತ 48 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿದ ಮೀನುಗಾರ – ಮೃತ್ಯುವನ್ನು ಗೆದ್ದು ಬಂದ ಅದೃಷ್ಟವಂತ

545 ಪಿಎಸ್‌ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮಾಡಲಾಗಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿತ್ತು. ಇದೀಗ  52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಮೃತ್ ಪಾಲ್​ರನ್ನು ಬಂಧಿಸಿದ್ದರು. ಇದೀಗ ಎಡಿಜಿಪಿ ಅಮೃತ ಪಾಲ್​ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Shwetha M