ನಕಲಿ ಇ-ಮೇಲ್ ಐಡಿ ಬಳಸಿ ಬಾಂಬ್ ಬೆದರಿಕೆ – ಶಾಲೆಗಳ ಇಮೇಲ್, ದತ್ತಾಂಶ ಸೋರಿಕೆಯಾಗಿದ್ದು ಹೇಗೆ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಶುಕ್ರವಾರ ಬಾಂಬ್ ಬೆದರಿಕೆ ಬಂದಿತ್ತು. ಇದು ಶಿಕ್ಷಕರು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ನಗರ ಹಲವು ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಶನಿವಾರ ಎಂದಿನಂತೆ ಶಾಲೆಗಳು ಓಪನ್ ಆಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಗಳು ಬಳಸಲಾದ ಇ-ಮೇಲ್ ಐಡಿ ನಕಲು ಎಂಬುದು ಪತ್ತೆಯಾಗಿದೆ. ಕೃತ್ಯ ಎಸಗಲೆಂದೆ ಆರೋಪಿಗಳು ನಕಲಿ ಐಡಿ ರಚಿಸಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು 1 ದಿನ ಮಾತ್ರ ಅವಕಾಶ! – ಯಾವ ಯಾವ ದಾಖಲೆಗಳು ಬೇಕು?
ನುರಿತ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು, ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್ಗಳನ್ನೂ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಪದೇ ಪದೇ ನಡೆಯುತ್ತಿರುವ ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳ್ಯಾರು ? ಕೃತ್ಯದ ಹಿಂದಿನ ಅಸಲಿ ಕಾರಣವೇನು ? ಶಾಲೆಗಳನ್ನೇ ಟಾರ್ಗೆಟ್ ಮಾಡಿ ಇ-ಮೇಲ್ ಕಳುಹಿಸುತ್ತಿರುವ ಹಿಂದಿನ ಉದ್ದೇಶವೇನು ? ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ಆ ದುಷ್ಕರ್ಮಿ ಯಾರು ಎಂದು ಹಲವು ಆಯಾಮಗಳಲ್ಲಿ ತನಿಖೆ ಕೈಕೊಂಡಿದ್ದಾರೆ.
ದುಷ್ಕರ್ಮಿ ವರ್ಚ್ಯುಯಲ್ ಪ್ರವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಇ-ಮೇಲ್ ಸಂದೇಶಗಳ ಕಳುಹಿಸಿದ್ದಾರೆ. ಹೀಗಾಗಿ ಪೊಲೀಸರು ದುಷ್ಕರ್ಮಿಗಳು ಬಳಸಿದ ಕಂಪ್ಯೂಟರ್, ಸೈಬರ್ ಕೆಫೆ ಅಥವಾ ಲ್ಯಾಪ್ ಟಾಪ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಿಡಿಗೇಡಿ ದೂರದ ದೇಶದ ನೆಟ್ವರ್ಕ್ ಬಳಸಿ ಕೃತ್ಯ ಎಸಗಿದ್ದಾರೆ. ಕಿಡಿಗೇಡಿ ಖಾಸಗಿ ಕಂಪನಿಯ ವಿಪಿಎನ್ ಬಳಸಿ ಇ-ಮೇಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಂಪನಿಯ ಯಾವ ಸರ್ವರ್ ಬಳಸಲಾಗಿದೆ ? ಬಳಸಿದ ಐಡಿ, ಐಪಿ ಯಾವುದು ? ಈ ಬಗ್ಗೆ ಮಾಹಿತಿ ನೀಡುವಂತೆ ವಿದೇಶದ Cyrtus ಎಂಬ ಕಂಪನಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ!
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ಹೊರಹಾಕುತ್ತಿದೆ. ಶಾಲೆಗಳ ದಾಖಲಾತಿ ಮೇಲ್ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸುತ್ತಿದೆ. ನಗರದ 60 ಕ್ಕೂ ಹೆಚ್ಚು ಶಾಲೆಗಳ ಇಮೇಲ್ ಹಾಗೂ ದತ್ತಾಂಶ ಸಿಕ್ಕಿದ್ದಾದರೂ ಹೇಗೆ? ನಮ್ಮ ಅಕೌಂಟ್ ಡಿಟೈಲ್ಸ್ ಮಕ್ಕಳ ದಾಖಲಾತಿ ಶಾಲೆಗಳ ಮೇಲ್ ಐಡಿ ಹಾಗೂ ದೂರವಾಣಿ ಸಂಖ್ಯೆಗಳು ಎಲ್ಲವೂ ಲೀಕ್ ಆಗಿವೆ. ಶಿಕ್ಷಣ ಇಲಾಖೆಗೆ ಕೊಟ್ಟ ಮಾಹಿತಿ ಸಮಾಜಿಕವಾಗಿ ಹೇಗೆ ಸಿಗಲು ಸಾಧ್ಯ ಎಂದು ಖಾಸಗಿ ಶಾಲೆಗಳ ಒಕ್ಕೂಟ ಪ್ರಶ್ನಿಸುತ್ತಿದೆ. ನಮ್ಮ ಶಾಲೆಗಳ ಮೇಲ್ ಡಿಟೈಲ್ಸ್, ದತ್ತಾಂಶ ದಾಖಲೆ ಎಲ್ಲವೂ ಶಿಕ್ಷಣ ಇಲಾಖೆ ಬಳಿ ಇವೆ. ಇವುಗಳು ಬೇರೆಯವರಿಗೆ ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ಹೀಗಿದ್ದಾಗ ಶಾಲೆಗಳ ದಾಖಲಾತಿ ಮೇಲ್ ಡಿಟೈಲ್ಸ್ ಹೇಗೆ ಸಿಕ್ಕಿದೆ ಅಂತಾ ಒಕ್ಕೂಟವು ಆಕ್ರೋಶ ಹೊರಹಾಕಿದೆ.