ಕನ್ನಡದ ಕೋಟ್ಯಾಧಿಪತಿ ಮತ್ತೆ ಶುರು! – ಬಿಗ್ ಬಾಸ್ ಬಿಟ್ಟು ಸುದೀಪ್ ಬರ್ತಾರಾ?
ಅಪ್ಪು ಜಾಗಕ್ಕೆ ಇವರೇ ಓಕೆ ನಾ..?
ಕನ್ನಡದ ಕೋಟ್ಯಾಧಿಪತಿ.. ಈ ಶೋ ಹೆಸ್ರು ಹೇಳಿದಾಗ ನೆನಪಾಗೋದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.. ಅಪ್ಪು ನಿರೂಪಣೆ ನೋಡಲು ಕನ್ನಡಿಗರು ಕಾದು ಕೂರ್ತಿದ್ರು.. ಈ ಶೋ ಕನ್ನಡಿಗರ ಮನೆ, ಮನಸ್ಸು ಗೆಲ್ಲೋದ್ರ ಜೊತೆಗೆ ಬಡವರಿಗೆ ವರ ಎನ್ನುವಂತೆ ರೂಪುಗೊಂಡಿತ್ತು. ಆದ್ರೀಗ ನಮ್ಮೊಂದಿಗೆ ಅಪ್ಪು ಇಲ್ಲ.. ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ.. ಇದೀಗ ಹೊಸ ನಿರೂಪಕರೊಂದಿಗೆ ಕನ್ನಡದ ಕೋಟ್ಯಾಧಿಪತಿ ಶೋ ಮತ್ತೆ ಬರಲು ಸಿದ್ಧವಾಗಿದೆ. ಹಾಗಾದ್ರೆ ಕನ್ನಡದ ಕೋಟ್ಯಾಧಿಪತಿ ಶೋ ನ ಯಾರು ಹೋಸ್ಟ್ ಮಾಡ್ತಾರೆ? ಯಾವಾಗಿಂದ ಶುರು ಆಗುತ್ತೆ? ಅಪ್ಪು ಜಾಗಕ್ಕೆ ಯಾವ್ಯಾವ ನಟ ಪೈಫೋಟಿ ಇದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಜರಾಯಿ ಜಮೀನು ಏನಾಯ್ತು?- ದೇವಸ್ಥಾನಗಳ ಹೆಸರಿಗೆ ಬಂದಿದ್ದೆಷ್ಟು ಆಸ್ತಿ?
ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಟಿವಿ ಕಾರ್ಯಕ್ರಮಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಕೂಡ ಒಂದು. ಈ ರಸಪ್ರಶ್ನೆ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡ್ತಿದ್ರು.. ಇದೇ ಶೋ ಮೂಲಕ ಕಿರುತೆರೆಯಲ್ಲಿ ಮೊದಲ ಬಾರಿಗೆ ನಿರೂಪಕರಾಗಿ ಪಾದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್, ತಮ್ಮ ಮುಗ್ಧ ನಿರೂಪಣೆಯಿಂದ ಜನಮನ ಗೆದ್ದಿದ್ರು. ಈ ಕೋಟಿ ಗೆಲ್ಲುವ ಕಾರ್ಯಕ್ರಮದಲ್ಲಿ ಸಾಮಾನ್ಯರಷ್ಟೇ ಅಲ್ಲದೇ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅಪ್ಪು ಎದುರು ಹಾಟ್ ಸೀಟ್‌ನಲ್ಲಿ ಕುಳಿತು ಆಟ ಆಡಿದ್ದಾರೆ. ಆದ್ರೆ 2021 ರಲ್ಲಿ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾದ್ರು.. ಅಪ್ಪು ಅಗಲಿಕೆಯ ನಂತ್ರ ಈ ಕಾರ್ಯಕ್ರಮ ಕೂಡ ನಿಂತು ಹೋಗಿತ್ತು.. ಆದ್ರೀಗ ಜನರ ಮನಗೆದ್ದ ಶೋ ಮತ್ತೆ ಪಾರಂಭವಾಗುತ್ತಿದೆ ಎಂಬ ಸುದ್ದಿಯೊಂದು ಸದ್ದು ಮಾಡ್ತಿದೆ. ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ನಡೆಸಿಕೊಡಲು ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ರೆಡಿಯಾಗಿದ್ದಾರೆ.. ಆ ನಟ ಬೇರೆ ಯಾರು ಅಲ್ಲ.. ಬಾದ್ ಷಾ ಕಿಚ್ಚ ಸುದೀಪ್..
ಹಿಂದಿ ಭಾಷೆಯಲ್ಲಿ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಈ ಕಾರ್ಯಕ್ರಮದ ಕನ್ನಡ ವರ್ಷನ್ ‘ಕನ್ನಡದ ಕೋಟ್ಯಾಧಿಪತಿ’. ಹೀಗೆ ಕನ್ನಡದಲ್ಲಿ ಆರಂಭ ಆಗಿದ್ದ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ಕೋಟಿ ಕೋಟಿ ಜನರ ಮನಸ್ಸು ಗೆದ್ದು ದೊಡ್ಡ ಸಾಧನೆ ಮಾಡಿತ್ತು. ಆರಂಭದಲ್ಲಿ ಈ ಶೋವನ್ನು ರಮೇಶ್ ಅರವಿಂದ್ ನಡೆಸಿಕೊಟ್ಟಿದ್ರು.. ಅದಾದ್ಮೇಲೆ ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದ್ರು.. ಆದರೆ ಪುನೀತ್ ರಾಜ್‌ಕುಮಾರ್ ಅವರು ಕೊನೆಯುಸಿರು ಎಳೆದ ನಂತರ ಮುಂದೆ ‘ಕನ್ನಡದ ಕೋಟ್ಯಾಧಿಪತಿ ಯನ್ನ ಯಾರು ನಡೆಸಿಕೊಡ್ತಾರೆ ಅನ್ನೋ ಚರ್ಚೆ ನಡೆದಿತ್ತು.. ಇದೀಗ ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಹಿಂದೆ ಕನ್ನಡದ ಕೋಟ್ಯಾಧಿಪತಿ ನಡೆಸಿದ್ದ ವಾಹಿನಿಗಳನ್ನ ಬಿಟ್ಟು ಬೇರೊಂದು ವಾಹಿನಿ ಶೋ ಪ್ರಸಾರವಾಗಲಿದೆಯಂತೆ. ಇದಕ್ಕೆ ಸುದೀಪ್ ಕೂಡ ಇದಕ್ಕೆ ಯೆಸ್ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೌದು, ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ ನಿರೂಪಣೆಗೆ ಗುಡ್‌ಬೈ ಹೇಳೊದಾಗಿ ಘೊಷಿಸಿದ್ದಾರೆ. ಇದೇ ನನ್ನ ಕೊನೆ ಬಿಗ್ ಬಾಸ್ ಸೀಸನ್ ಎಂದಿರೋ ಕಿಚ್ಚ, ಬೇರೆ ಹೋಸ್ಟ್ ನೋಡಿಕೊಳ್ಳಿ ಅಂತ ಕಲರ್ಸ್ ಕನ್ನಡ ವಾಹಿನಿಗೆ ಸೂಚನೆ ಕೊಟ್ಟಿದ್ರು.. ಇತ್ತೀಚೆಗಷ್ಟೇ ಬಿಗ್ ಬಾಸ್ ಮತ್ತೆ ಹೋಸ್ಟ್ ಮಾಡೋದ್ರ ಬಗ್ಗೆ ಸುಳಿವು ನೀಡಿದ್ರು.. ಈ ನಡುವೆಯೇ ಕನ್ನಡದ ಕೋಟ್ಯಾಧಿಪತಿ ಶೋ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಮತ್ತಷ್ಟು ಹೆಚ್ಚಾಗಿದ್ದು, ಇದಕ್ಕೆ ವಿವರಣೆ ಸಿಗಬೇಕು ಅಂದ್ರೆ ಮತ್ತಷ್ಟು ದಿನಗಳ ಕಾಲ ಫ್ಯಾನ್ಸ್ ಕಾಯಬೇಕಿದೆ.
ಇನ್ನು ಸುದೀಪ್ ಕನ್ನಡದ ಕೋಟ್ಯಾಧಿಪತಿ ಒಪ್ಪಿಕೊಳ್ಳಲು ಬಲವಾದ ಕಾರಣ ಕೂಡ ಇದೆ ಎಂದು ಚರ್ಚೆ ನಡೆಯುತ್ತಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಅಪ್ಪಟ ಫ್ಯಾಮಿಲಿ ಶೋ ಆಗಿದೆ. ಇದರ ನಿರೂಪಣೆ ಹೊಣೆ ಹೊತ್ತರೆ ಮತ್ತಷ್ಟು ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾಗಬಹುದು ಅನ್ನೋದು ಕಿಚ್ಚನ ಲೆಕ್ಕಾಚಾರ. ಅದಷ್ಟೇ ಅಲ್ಲದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೀವದ ಗೆಳೆಯರು. ಹೀಗಿದ್ದಾಗ, ಪುನೀತ್ ರಾಜ್‌ಕುಮಾರ್ ಬಿಟ್ಟು ಹೋಗಿರುವ ಕಾರ್ಯಕ್ರಮ ಮತ್ತೆ ಶುರು ಮಾಡಲು ಕಿಚ್ಚ ಸುದೀಪ್ ಮುಂದೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇನ್ನು ಮತ್ತೊಂದ್ಕಡೆ ಈ ಶೋ ಹೋಸ್ಟ್ ಮಾಡಲು ಬೇರೆ ನಟರು ಕೂಡ ರೇಸ್ ನಲ್ಲಿ ಇದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ. ರಮೇಶ್ ಅರವಿಂದ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಆರಂಭದಲ್ಲಿ ಹೋಸ್ಟ್ ಮಾಡುತ್ತಿದ್ದರು.. ಇದೀಗ ಮುಂದಿನ ಸೀಸನ್ ಅನ್ನ ಅವರೇ ನಡೆಸಿಕೊಟ್ಟರೆ ಒಳ್ಳೆದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಈ ಕಾರ್ಯಕ್ರಮ ನಡೆಸಿಕೊಡಬಹುದು ಅಂತಾ ಹೇಳಲಾಗ್ತಿದೆ. ಆದ್ರೆ ಈ ಶೋ ಪ್ರಾರಂಭವಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್‌ಡೇಟ್ ಸಿಗ್ಬೋದು.. ಆದ್ರೆ ವೀಕ್ಷಕರು ಮಾತ್ರ ಭಾರಿ ಕುತೂಹಲದಿಂದ ಈ ಶೋಗಾಗಿ ಕಾಯುತ್ತಿದ್ದಾರೆ.