ನಿನ್ನೆ ಕೇರಳ, ಇವತ್ತು ತಮಿಳುನಾಡು – ಕನ್ನಡದ ಬಾವುಟ ತೆಗೆದು ಅಯ್ಯಪ್ಪ ಮಲಾಧಾರಿಗಳ ಜೊತೆ ಕಿರಿಕ್

ನಿನ್ನೆ ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಲಾಧಾರಿಗಳನ್ನ ರಸ್ತೆಯಲ್ಲೇ ಪೊಲೀಸರು ಅಡ್ಡಗಟ್ಟಿದ್ರು. ಇಂದು ತಮಿಳುನಾಡಿನಲ್ಲಿ ದೌರ್ಜನ್ಯ ನಡೆದಿದೆ. ಕರ್ನಾಟಕದಿಂದ ಮಾಲೆ ಧರಿಸಿ ಶಬರಿಮಲೆಗೆ ತೆರಳಿದ್ದ ಕನ್ನಡಿಗರು ವಾಪಾಸ್ ಬರುವ ವೇಳೆ ತಮಿಳುನಾಡಿನಲ್ಲಿ ಕೆಲವರು ನಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಿಂದ ಶಬರಿಮಲೆಗೆ ಹೋಗಿದ್ದ ಭಕ್ತರ ಜೊತೆ ತಮಿಳಿಗರು ಬಾವುಟ ತೆಗೆಯುವಂತೆ ಕಿರಿಕ್ ತೆಗೆದಿದ್ದಾರೆ ಎನ್ನಲಾಗ್ತಿದೆ.
ಬಾವುಟ ಕಿತ್ತು ಅವಾಚ್ಯ ಶಬ್ದಗಳಿಂದ ನಿಂದನೆ
ನಮ್ಮ ಪಾಡಿಗೆ ನಾವು ವಾಪಾಸಾಗುತ್ತಿದ್ದೆವು. ಈ ವೇಳೆ ತಮಿಳಿಗರು ಬಾವುಟದ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ನಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಕನ್ನಡಿಗರು ಆರೋಪ ಮಾಡಿದ್ದಾರೆ. ತಮಿಳಿಗರ ದೌರ್ಜನ್ಯದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ನೆಟ್ಟಿಗರು ಭಾರೀ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕದ ಶಬರಿಮಲೆ ಯಾತ್ರಿಗಳಿಗೆ ಕೇರಳದಲ್ಲಿ ನಿರ್ಬಂಧ ಆರೋಪ ಕೇಳಿ ಬಂದಿತ್ತು. ಕೇರಳದ ಎರುಮಲೈಯಲ್ಲಿ ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ರು. ಕರ್ನಾಟಕ ನೋಂದಣಿ ಇರುವ ವಾಹನಗಳಿಗೆ ನಿರ್ಬಂಧ ಆರೋಪ ಹಿನ್ನೆಲೆ ಕೇರಳ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಶಬರಿಮಲೆ ಯಾತ್ರಾರ್ಥಿಗಳು ರಸ್ತೆಯಲ್ಲೇ ಕುಳಿತು ಭಜನೆ ಮಾಡಿ, ಪ್ರತಿಭಟನೆ ನಡೆಸಿದ್ರು. ಕೇರಳ ರಾಜ್ಯ ಪೊಲೀಸರು ಕರ್ನಾಟಕ ನೋಂದಣಿ ಇರುವ ವಾಹನಗಳಿಗೆ ನಿರ್ಬಂಧ ಹೇರಿದ್ದ ಆರೋಪ ಕೇಳಿಬಂದಿತ್ತು. ಕೇರಳ ರಾಜ್ಯ ಹಾಗೂ ಇತರೆ ವಾಹನಗಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದರು ಎನ್ನಲಾಗಿತ್ತು. ಶಬರಿಮಲೆಗೂ ಮುನ್ನ ಎರುಮಲೈನಲ್ಲಿ ಕೇರಳ ಪೊಲೀಸರು ನೀವು 60 ಕಿಲೋ ಮೀಟರ್ ದೂರ ಖಾಸಗಿ ವಾಹನ ಬಳಸುವಂತಿಲ್ಲ. ಖಾಸಗಿ ವಾಹನದ ಬದಲು ಕೇರಳದ ಬಸ್ ವ್ಯವಸ್ಥೆ ಮಾಡಿದ್ದೇವೆ. ಅದರಲ್ಲಿ ನೀವು ತೆರಳಬೇಕು ಎಂದು ನಿರ್ಬಂಧ ವಿಧಿಸಿದ್ದರು. ಈ ನಡುವೆ ಈಗ ತಮಿಳುನಾಡಿನಲ್ಲಿ ದೌರ್ಜನ್ಯ ನಡೆದಿದ್ದು, ನಮ್ಮ ಕರ್ನಾಟಕ ಸರ್ಕಾರ ಇದರ ಬಗ್ಗೆ ಧ್ವನಿ ಎತ್ತದೇ ಏನ್ ಮಾಡ್ತಿದೆ ಅನ್ನೋ ಪ್ರಶ್ನೆ ಎದ್ದಿದೆ.

ನೋಡಿರಿ

