ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅಸ್ತಂಗತ – ಅಭಿನಯ ಸರಸ್ವತಿ ಅಗಲಿಕೆಗೆ ಚಿತ್ರರಂಗದ ಗಣ್ಯರ ಸಂತಾಪ

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಇನ್ನಿಲ್ಲ. ಅಭಿನಯ ಸರಸ್ವತಿ ಬಿ. ಸರೋಜಾದೇವಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಸರೋಜಾದೇವಿ ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷಗಳಾಗಿತ್ತು.
ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಟಿಯಾಗಿದ್ದರು. ಬಿ. ಸರೋಜಾದೇವಿ ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಸರೋಜಾದೇವಿ ಅವರು ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಟಿ. ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯೆ, ಬೆಟ್ಟದ ಹೂವು, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ತಿರುಮಣಂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.
ಆರೂವರೆ ದಶಕ ಚಿತ್ರರಂಗದಲ್ಲಿ ಮಿಂಚಿದ್ದ ತಾರೆ ಬಿ ಸರೋಜಾದೇವಿ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನೋಡಿರಿ

