ಮುಗಿದ ದಿಲೀಪ್ ರಾಜ್ ಅಧ್ಯಾಯ.. ಗೋವಾದಲ್ಲೇ ಸಿಕ್ಕಿತ್ತಾ ಮುನ್ಸೂಚನೆ? – ಸೀರಿಯಲ್ ಕಿಂಗ್ AJ ಗೆ ಆಗಿದ್ದೇನು?

ಮುಗಿದ ದಿಲೀಪ್ ರಾಜ್ ಅಧ್ಯಾಯ.. ಗೋವಾದಲ್ಲೇ ಸಿಕ್ಕಿತ್ತಾ ಮುನ್ಸೂಚನೆ? – ಸೀರಿಯಲ್ ಕಿಂಗ್ AJ ಗೆ ಆಗಿದ್ದೇನು?

ಸ್ಯಾಂಡಲ್‌ವುಡ್‌ಗೆ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ನಟ, ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಸ್ನೇಹ ಜೀವಿಯಾಗಿದ್ದ ದಿಲೀಪ್‌ ತನ್ನ ಚಟ-ಪಟ ಮಾತುಗಳ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ರು. 47ನೇ ವಯಸ್ಸಲ್ಲಿ ಸಖತ್ ಫಿಟ್ ಆಗಿದ್ದ ದಿಲೀಪ್ ರಾಜ್ ಹೃದಯಘಾತಕ್ಕೆ ಬಲಿಯಾಗಿದ್ದು, ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ವಿಶ್ವಾಸಮತ ಯಾಚನೆ ಗೆದ್ದ ವಿಜಯ್‌- ದಳಪತಿ ಸರ್ಕಾರಕ್ಕೆ 144 ಶಾಸಕರ ಬೆಂಬಲ

ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮತ್ತಷ್ಟು  ಫೇಮಸ್ ಆಗಿದ್ದ ನಟ ದಿಲೀಪ್‌ ರಾಜ್ ಅವರು 47ನೇ ವಯಸ್ಸಿನಲ್ಲೇ ಉಸಿರುಚೆಲ್ಲಿದ್ದಾರೆ. ಬೆಳ್ಳಿತೆರೆಯಲ್ಲಿ ದೊಡ್ಡ ಸಕ್ಸಸ್ ಸಿಗದಿದ್ರು ಕೂಡಾ ಕಿರುತೆರೆಯಲ್ಲಿ ನಟನಾಗಿ ನಿರ್ಮಾಪಕನಾಗಿ ಯಶಸ್ಸು ಕಂಡಿದ್ದ ದಿಲೀಫ್‌ ರಾಜ್‌ ಇನ್ನು ನೆನಪು ಮಾತ್ರ. ಇಂದು ಮುಂಜಾನೆ ದಿಲೀಪ್‌ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನ ಕುಮಾರಸ್ವಾಮಿ ಲೇಔಟ್‌ನಲ್ಲಿರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ದಿಲೀಪ್‌ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದೀಗ ದಿಲೀಪ್‌ ರಾಜ್‌ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಅಂದ್ಹಾಗೆ ನಟ ದಿಲೀಪ್ ರಾಜ್ ಅವರು ಫಿಟ್ನೆಸ್ ವಿಚಾರದಲ್ಲಿ ಕಟ್ಟು ನಿಟ್ಟಾಗಿದ್ರು. ನಿತ್ಯ ಜಿಮ್ ಮಾಡ್ತಿದ್ದ ದಿಲೀಪ್ 47ರಲ್ಲೂ ಸೀರಿಯಲ್ ನಲ್ಲಿ ಯಂಗ್ ಹೀರೋಗೆ ಸೆಡ್ಡು ಹೊಡೆಯುವಂತೆ ಪಿಟ್ ಆಗಿ ಕಾಣಿಸಿಕೊಳ್ತಿದ್ರು. ಆದ್ರೂ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದು ಶಾಕಿಂಗ್‌ ವಿಚಾರನೇ. ಇದೀಗ ಇವರ ಸಾವಿನ ಸುದ್ದಿ ಕೇಳ್ತಿದ್ದಂತೆ ಅವರಿಗೆ ಮುಂಚೆಯೇ ಹೃದಯದ ಸಮಸ್ಯೆ ಇತ್ತಾ? ಯಾವಾಗ ಎದೆ ನೋವು ಕಾಣಿಸಿಕೊಂಡಿತ್ತು? ಎಂಬೆಲ್ಲಾ ಪ್ರಶ್ನೆ ಎದ್ದಿದೆ. ಇದಕ್ಕೂ ಈಗ ಉತ್ತರ ಸಿಕ್ಕಿದೆ. ನಟ ದಿಲೀಪ್‌ಗೆ ಇದಕ್ಕೂ ಮುನ್ನ ಕೂಡ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗ್ತಿದೆ.

ನಟ ದಿಲೀಪ್‌ಗೆ ಗೋವಾ ಟ್ರಿಪ್ ಹೋಗಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿತ್ತಂತೆ. ಪದೇ ಪದೆ ಎದೆ ನೋವು ಕಾಣಿಸಿಕೊಳ್ಳುತ್ತಿತ್ತು. ಅಂದೇ ದಿಲೀಪ್ ರಾಜ್​​ಗೂ ಅನುಮಾನ ಮೂಡಿತ್ತು ಎನ್ನಲಾಗ್ತಿದೆ. ಹೀಗಾಗೇ ಬೆಂಗಳೂರಿಗೆ ಬಂದು ತಪಾಸಣೆಗೂ ಮುಂದಾಗಿದ್ರು ಎನ್ನಲಾಗ್ತಿದೆ. ದುರಾದೃಷ್ಟ ಅಂದ್ರೆ ಇಂದು ನಟ ದಿಲೀಪ್ ರಾಜ್ ಅವರು ಆಸ್ಪತ್ರೆಗೆ ತೆರಳಿ ಹೃದಯದ ತಪಾಸಣೆ ನಡೆಸಬೇಕಿತ್ತು. ಅಪಾಯಿಂಟ್​ಮೆಂಟ್ ಕೂಡ ತೆಗೆದುಕೊಂಡಿದ್ರಂತೆ. ಆದ್ರೆ  ನಟ ದಿಲೀಪ್​​ಗೆ ಮಧ್ಯ ರಾತ್ರಿಯೇ ಎದೆನೋವು ಕಾಣಿಸಿಕೊಂಡಿದೆ. ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಟ ದಿಲೀಪ್ ರಾಜ್ ಸಾವಿಗೆ ಅವರು ಮಾಡಿದ ಸಣ್ಣ ನಿರ್ಲಕ್ಷ್ಯವೇ ಕಾರಣವಾಯ್ತು ಎನ್ನಲಾಗ್ತಿದೆ. ಹೃದಯದಲ್ಲಿ ನೋವು ಕಾಣಿಸಿಕೊಂಡ ತಕ್ಷಣವೇ ಆರೋಗ್ಯ ತಪಾಸಣೆ ಮಾಡಿಕೊಳ್ತಿದ್ರೆ ಈ ದುರಂತ ಅಂತ್ಯ ತಡೆಯಬಹುದಿತ್ತು. ಆದ್ರೆ ದಿಲೀಪ್‌ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಅಂದ್ಹಾಗೆ ನಟ ದಿಲೀಪ್ ರಾಜ್ 1978ರ ಸೆಪ್ಟಂಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದ ದಿಲೀಪ್ ರಾಜ್​ ಅವರು ನಾಟಕ ತಂಡ ಸೇರಿದ್ರು. ಬಳಿಕ ಸಿನಿಮಾಗಳತ್ತ ಮುಖ ಮಾಡಿದ್ರು. ಮೊದಲು ಕಿರುತೆರೆಗೆ ಕಾಲಿಟ್ಟ ದಿಲೀಪ್ ರಾಜ್​ ಕಂಬದ ಮನೆ  ಧಾರಾವಾಹಿ ನಟಿಸಿದ್ರು, ನಂತರ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಪ್ರೀತಿಗಾಗಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ಇನ್ನು 2005ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ದಿಲೀಪ್‌ ಭಾಯ್ ಫ್ರೆಂಡ್ ಚಿತ್ರದಲ್ಲಿ ನಟಿಸಿದ್ರು. ಅದಾದ ಬಳಿಕ 2007ರಲ್ಲಿ ಮಿಲನ ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದ್ರು. ನಂತರ 7 ಓ ಕ್ಲಾಕ್, ಕ್ಷಣ ಕ್ಷಣ ಚಿತ್ರದಲ್ಲಿ ನಟಿಸಿದ್ರು. ಆದ್ರೆ ಅವರ ಪ್ರತಿಭೆಗೆ ತಕ್ಕಂತೆ ದಿಲೀಪ್ ರಾಜ್‌ಗೆ ಸಿನಿಮಾಗಳಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದರು. ಅಲ್ಲೂ ನಟರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ರಥಸಪ್ತಮಿ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ ದಿಲೀಪ್, ಕೆಲ ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿದ್ರು. ದಿಲೀಪ್ ರಾಜ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿ, ಆ ಧಾರಾವಾಹಿಯನ್ನ ಅವರೇ ನಿರ್ಮಾಣ ಮಾಡಿ ಸಕ್ಸಸ್‌ ಕಂಡಿದ್ರು. ಈ ಸೀರಿಯಲ್‌ನಲ್ಲಿ ಎಜೆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಲ್ಲದೇ ಸಿನಿಮಾ ರಂಗದಿಂದ ಲಾಂಗ್‌ ಬ್ರೇಕ್‌ ಪಡೆದಿದ್ದ ದಿಲೀಪ್‌ ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ನಟಿಸಿ ಮಿಂಚಿದ್ರು. ಇತ್ತೀಚೆಗಷ್ಟೇ ದಿಲೀಪ್ ರಾಜ್‌ ಹೊಚ್ಚ ಹೊಸ ಧಾರಾವಾಹಿ ಕೃಷ್ಣ ರುಕ್ಕು  ಆರಂಭ ಮಾಡಿದ್ದರು. ಇಷ್ಟೇ ಅಲ್ಲದೇ, ಬ್ರಹ್ಮಗಂಟು ಅನ್ನೋ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಪ್ರತಿಭಾನ್ವಿತ ನಟ ನಿರ್ದೇಶಕ ವಿಧಿಯ ಆಟಕ್ಕೆ ಬಲಿಯಾಗಿದ್ದು ನಿಜಕ್ಕೂ ದುಂರತ. ದಿಲೀಪ್‌ ರಾಜ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಖಃ ಬರಿಸುವ ಶಕ್ತಿ ಸಿಗಲಿ.

Shwetha M

Leave a Reply

Your email address will not be published. Required fields are marked *