ದುಬಾರೆಯಲ್ಲಿ ಕಂಜನ್ & ಮಾರ್ತಾಂಡ ಆನೆಗಳ ಕಾದಾಟ – ಸಾಕಾನೆಗಳ ಕಾಳಗಕ್ಕೆ ಸಿಲುಕಿ ಪ್ರವಾಸಿ ಮಹಿಳೆ ಸಾವು!

ಪ್ರವಾಸಕ್ಕೆಂದು ಆನೆ ಶಿಬಿರಕ್ಕೆ ಬಂದ ಮಹಿಳೆ ಆನೆಗಳ ಕಾದಾಟದಲ್ಲಿ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಕೊಡಗಿನಲ್ಲಿ ನಡೆದಿದೆ. ಮದಗಜಗಳ ಕಾಳಗಕ್ಕೆ ಕರುನಾಡೇ ಬೆಚ್ಚಿ ಬಿದ್ದಿದೆ. ಸಂಭ್ರಮದ ಕ್ಷಣಗಳನ್ನು ಕಳೆಯೋಕೆ ಬಂದ ಕುಟುಂಬದ ಪಾಲಿಗೆ ಈ ಪ್ರವಾಸ ದುರಂತವಾಗಿ ಪರಿಣಮಿಸಿದೆ. ದುಬಾರೆ ಆನೆ ಶಿಬಿರದಲ್ಲಿ ನಡೆದಿರೋ ಈ ಘೋರ ದುರಂತದಲ್ಲಿ ಚೆನ್ನೈ ಮೂಲದ ಜಿನ್ಶು (33) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ತಿಂಗಳಿಗೆ ₹78 ಕೋಟಿ ಬಡ್ಡಿ.. ₹4,500 ಕೋಟಿ ಹಗರಣ – ಸಿಐಡಿ ತನಿಖೆಯಲ್ಲಿ ಬಯಲಾಗುತ್ತಾ ಶಿವಾನಂದನ ಲೀಲೆ?
ಕೊಡಗಿನಲ್ಲಿ ಪ್ರವಾಸಕ್ಕೆಂದು ತಮಿಳುನಾಡಿನಿಂದ ಬಂದಿದ್ದ ಪ್ರವಾಸಿಗರ ತಂಡದ ಜೊತೆ ಜಿನ್ಶು ಕೂಡ ಆಗಮಿಸಿದ್ದರು. ದುಬಾರೆ ಪ್ರವಾಸಿ ತಾಣದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಕೊಡುವುದು ಪ್ರವಾಸಿಗರಿಗೆ ವಿಶೇಷ ಆಕರ್ಷಣೆ. ಇದೇ ರೀತಿಯಾಗಿ ಜಿನ್ಶು ಕೂಡ ಸಾಕಾನೆಗೆ ಸ್ನಾನ ಮಾಡಿಸಲು ಮುಂದಾಗಿದ್ದರು. ಆನೆಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದಾಗ, ಅಲ್ಲಿ ಇದ್ದ 2 ಆನೆಗಳು ಏಕಾಏಕಿ ಜಗಳ ಆರಂಭಿಸಿವೆ. ಮದವೇರಿದ ಗಜಗಳ ಕಾಳಗದಿಂದ ಗೊಂದಲದ ವಾತಾವರಣ ಉಂಟಾಗಿದೆ. ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಲು ಶುರು ಮಾಡಿದೆ. ಅಲ್ಲಿದ್ದ ಪ್ರವಾಸಿಗರು ಭಯಪಟ್ಟು ಓಡಲು ಪ್ರಯತ್ನಿಸಿದ್ದಾರೆ.
ಅಷ್ಟಕ್ಕೂ ಇಲ್ಲಿ ಕಾದಾಟಕ್ಕೆ ಇಳಿದಿದ್ದು ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾರ್ತಾಂಡ ಆನೆಗೆ ಗುದ್ದಿದ್ದು, ಮಾರ್ತಾಂಡ ಆಯ ತಪ್ಪಿ ಕೆಳಗೆ ಬಿದ್ದಾಗ, ಈ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ನೀರಿನಲ್ಲಿ ಬಿದ್ದ ಜಿನ್ಶು ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರಿಗೆ ಇಳಿದು ಅವರನ್ನು ಹೊರತೆಗೆಯಲು ಪ್ರಯತ್ನುಸಿದ್ದಾರೆ. ಅದಾಗಲೇ ಅವರು ಗಂಭೀರ ಸ್ಥಿತಿಗೆ ತಲುಪಿದ್ದರು. ನಂತರ ಅವರನ್ನು ನದಿಯಿಂದ ಹೊರಗೆ ತಂದು ಚಿಕಿತ್ಸೆಗಾಗಿ ಕರೆದೊಯ್ಯುವ ಪ್ರಯತ್ನ ನಡೆದ್ರೂ ಬದುಕುಳಿಯಲಿಲ್ಲ. ಇದು ಯಾರೂ ಊಹಿಸದಂತಹ ಘಟನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇಂತಹ ಅಚಾತುರ್ಯಗಳು ಆಗದ ರೀತಿಯಲ್ಲಿ ಕ್ರಮ ವಹಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪ್ರವಾಸಿಗರ ಹೇಳಿಕೆಗಳನ್ನು ದಾಖಲಿಸುವ ಕಾರ್ಯವೂ ನಡೆಯುತ್ತಿದೆ. ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತೆ, ಆನೆಗಳ ನಿಯಂತ್ರಣ, ಮಾರ್ಗದರ್ಶನ ಇತ್ಯಾದಿ ಬಗ್ಗೆ ಕೂಡ ಪೊಲೀಸರು ಹಾಗೂ ಸಂಬಂಧಿತ ಇಲಾಖೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಜಿನ್ಶು ಅವರ ದುರ್ಮರಣ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಸಂತೋಷದಿಂದ ಪ್ರಾರಂಭವಾದ ಪ್ರವಾಸ ದುರ್ಘಟನೆಯಾಗಿ ಅಂತ್ಯಗೊಂಡಿರುವುದು ಹೃದಯ ವಿದ್ರಾವಕ. ಪ್ರವಾಸಿ ತಾಣಗಳಿಗೆ ಹೋಗುವಾಗ ಸುರಕ್ಷತೆ, ಮಾರ್ಗದರ್ಶಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಸದ್ಯ ಘಟನೆ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇದು ಅತ್ಯಂತ ಆಘಾತಕರ ಘಟನೆ, ಆನೆಗಳನ್ನು ಸ್ನಾನ ಮಾಡಿಸುವಾಗ ನದಿಯ ಬಳಿ ನಿಂತು ನೋಡುತ್ತಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ಈ ಅಪಘಾತದಂತಹ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಮಗೆ ತಿಳಿಸಿದ್ದು, ಇದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.

ನೋಡಿರಿ

