ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ವಿರೋಧ ವ್ಯಕ್ತವಾಗುತ್ತಿದ್ದಂತೆ ಆಹ್ವಾನ ರದ್ದು!

ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ವಿರೋಧ ವ್ಯಕ್ತವಾಗುತ್ತಿದ್ದಂತೆ ಆಹ್ವಾನ ರದ್ದು!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ.  ನವೆಂಬರ್ 25 ಮತ್ತು 26ರಂದು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಕೂಡ ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಭಾರಿ ಟೀಕೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಆಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ರೈ ಮಾಹಿತಿ ನೀಡಿದ್ದು,  ಕಂಬಳ ಒಂದು ಕ್ರೀಡೆ ಇದು ದೊಡ್ಡ ಕಾರ್ಯಕ್ರಮ ಆಗಿದೆ. ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳ್ತಾರೆ. ಸಿದ್ದಿ ಜನಾಂಗದವರು ಬಂದು ಕೋರಿದ್ರು. ಆದ್ರೆ ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ಆದರೆ ಇನ್ವಿಟೇಷನ್ ನಲ್ಲಿ ಅವರ ಹೆಸರಿದೆ. ಅವರು ಕಂಬಳಕ್ಕೆ ಬರೋದಿಲ್ಲ. ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ ಎಂದರು.

ಇನ್ನು ವಿವಾದದ ಬೆನ್ನಲ್ಲೇ ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್ ಹೆಸರು ಕೈ ಬಿಡಲು ನಿರ್ಧಾರ ಮಾಡಲಾಗಿದೆ. ಕಡೆ ಘಳಿಗೆಯಲ್ಲಿ ಆಹ್ವಾನ ಪತ್ರಿಕೆ ಬದಲು ಮಾಡಲಾಗುತ್ತಿದೆ. ಬ್ರಿಜ್ ಭೂಷಣ್ ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಈ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಬ್ರಿಜ್ ಭೂಷಣ್ ಕಂಬಳಕ್ಕೆ ಆಗಮಿಸುವ ಬಗ್ಗೆ ಕನ್ಫರ್ಮೇಷನ್ ನೀಡಿರಲಿಲ್ಲ ಎಂದು ಅಶೋಕ್ ರೈ ತಿಳಿಸಿದ್ದಾರೆ.

Shwetha M