ಗೆದ್ದ ಕಲ್ಕಿ, ಎದ್ದ ಪ್ರಭಾಸ್ – ಎಂಥಾ ಕ್ಲೈಮ್ಯಾಕ್ಸ್ ಅದು ಅಬ್ಬಬ್ಬಾ…
ವಾರದಲ್ಲೇ 500 ಕೋಟಿ ಬಾಚುತ್ತಾ?

ಗೆದ್ದ ಕಲ್ಕಿ, ಎದ್ದ ಪ್ರಭಾಸ್ – ಎಂಥಾ ಕ್ಲೈಮ್ಯಾಕ್ಸ್ ಅದು ಅಬ್ಬಬ್ಬಾ…ವಾರದಲ್ಲೇ 500 ಕೋಟಿ ಬಾಚುತ್ತಾ?

ವಿಷ್ಣುವಿನ 10ನೇ ಅವತಾರ ಎಂದು ಕರೆಯಲ್ಪಡುವ ‘ಕಲ್ಕಿ’ಯ ಅವತಾರ ಥಿಯೇಟರ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಾಗಿದೆ. ಪ್ರತಿ 10 ನಿಮಿಷಗಳಿಗೊಮ್ಮೆ ಬರುವ ಹೊಸ ಹೊಸ ಪಾತ್ರಗಳು.. ಅಚ್ಚರಿ ಹುಟ್ಟಿಸುವ ಪ್ರತಿ ಸೀನ್‌ಗಳು.. ಕ್ಲೇಮ್ಯಾಕ್ಸ್ ಅಂತೂ ಅಬ್ಬಬ್ಬಾ.. ದಾಖಲೆ ಮೇಲೆ ದಾಖಲೆ ಬರೆಯಲು ಬಂದಿರುವ ಕಲ್ಕಿ ಸಿನಿಮಾ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿದ್ದೇಗೌಡ್ರು, ಗೌಡ್ರ ವಾಯ್ಸ್ ಒಂದೇ ಅಲ್ವಾ? – ಭಾವನಾ ಇಷ್ಟೊಂದು ಪೆದ್ದಿನಾ?

ಕಲ್ಕಿ 2898 ಎಡಿ. ಬಹುಶಃ ಪ್ರೇಕ್ಷಕರೇ ಹೇಳುವ ಹಾಗೆ ಬಾಹುಬಲಿ ಸಿನಿಮಾಕ್ಕಿಂತಲೂ ಒಂದು ಕೈ ಮೇಲೇಯೇ ಇರುವ ಸಿನಿಮಾ. ಗ್ರಾಫಿಕ್ಸ್ ಅದ್ಭುತ, ಚಿತ್ರ ಸೃಷ್ಟಿಸಿದ ಲೋಕವೇ ಅತ್ಯದ್ಭುತ.. ದೃಶ್ಯ ವೈಭವವಂತೂ ಅಲ್ಟಿಮೇಟ್. ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಗ್ರೇಟ್ ಕಮ್‌ಬ್ಯಾಕ್ ಮಾಡಿದ್ದಾರೆ ಪ್ರಭಾಸ್. ಕಲ್ಕಿ ಚಿತ್ರದಲ್ಲಿ ಅನಿಮೇಷನ್ ಎಷ್ಟು ಸೂಪರ್ ಆಗಿದ್ಯೋ, ಅದ್ರ ದುಪ್ಪಟ್ಟು ಪ್ರಭಾಸ್ ಲುಕ್ ಅದ್ಭುತವಾಗಿದೆ ಅಂತಿದ್ದಾರೆ ಫ್ಯಾನ್ಸ್. “ಇದು ಕಲ್ಕಿ ಅಲ್ಲ ಬುಜ್ಜಿ ಮತ್ತು ಭೈರವ” ಎಂದು ಫ್ಯಾನ್ಸ್ ಪ್ರಭಾಸ್‌ಗೆ ಬಹುಪರಾಕ್ ಹೇಳಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ADಯಲ್ಲಿ ಪ್ರಭಾಸ್ ಭೈರವ ಮತ್ತು ಅಮಿತಾಬ್ ಬಚ್ಚನ್ ಅಶ್ವಥಾಮನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಕಾಶಿಯಲ್ಲಿ ಯಾಸ್ಕಿನ್ ಅಂದರೆ ಕಮಲ್ ಹಾಸನ್ ಆಡಳಿತವನ್ನೂ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಕಲ್ಕಿಯ ತಾಯಿಯಾಗಿ ದೀಪಿಕಾ ಪಡುಕೋಣೆಯ ನಟನೆಗಂತೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಫ್ಯಾನ್ಸ್. ಮನುಕುಲವನ್ನೇ ಬದಲಿಸಲು ಎರಡು ಸಾವಿರ ವರ್ಷಗಳಿಂದ ಕಾಯುತ್ತಿದ್ದಾನೆ ಯಾಸ್ಕಿನ್. ಕಮಲ್‌ಹಾಸನ್ ಶೈತಾನ್ ದೊರೆಯಾಗಿ ಕಾಣಿಸಿಕೊಂಡಿದ್ದಲ್ಲದೇ, ಆಕ್ಟಿಂಗ್ ಅಂತೂ ಮನಮೋಹಕ.

ವಿಶ್ವದ ಮೊದಲ ನಗರ ಕಾಶಿ. ಕಾಶಿಯಲ್ಲಿ ಯಾಸ್ಕಿನ್​ನದ್ದೇ ರಾಜ್ಯಭಾರ. ಭೂಮಿಯ ಮೇಲೆ ಹಸಿರೆಂಬುದೇ ಇಲ್ಲ. ಜನ ಉಸಿರುಗಟ್ಟಿ ಬದುಕುತ್ತಿದ್ದಾರೆ. ಜನರನ್ನು ಸಂಕಟದಿಂದ ಪಾರು ಮಾಡಲು ಕಲ್ಕಿ ಅವತಾರವತ್ತಿ ಬರಬೇಕು. ‘ಕಲ್ಕಿ’ಯ ಜನನ ತಡೆಯಲು ಯಾಸ್ಕಿನ್ ಪ್ರಯತ್ನ ಪಡ್ತಾನೆ. ದೇವರನ್ನು ಗರ್ಭದಲ್ಲಿ ಹೊತ್ತ ಮಾತೆಯನ್ನು ಕಾಯಲು ಸ್ವತಃ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮ ದೇವಮಾತೆಯ ಜೊತೆಗೆ ನಿಂತಿದ್ದಾನೆ. ಮಹಾಭಾರತದಲ್ಲಿ ಕೌರವರ ಪರ ನಿಂತಿದ್ದ ಅಶ್ವತ್ಥಾಮ ಹಾಗೂ ಕರ್ಣ, ‘ಕಲ್ಕಿ’ ಕತೆಯಲ್ಲಿ ಧರ್ಮದ ಪರ ನಿಂತಿದ್ದಾರೆ, ಈ ಯೋಚನೆಯೇ ಅದ್ಭುತವಾಗಿದೆ. ಇಂಥಹಾ ಮೈನವಿರೇಳಿಸುವ ಹಲವು ಅಂಶಗಳು ಸಿನಿಮಾಗಳಿವೆ.

ನಿರ್ದೇಶಕ ನಾಗ್ ಅಶ್ವಿನ್ ‘ಕಲ್ಕಿ’ ಸಿನಿಮಾ ಪ್ರಾರಂಭಿಸಿರುವುದೇ ಕುರುಕ್ಷೇತ್ರ ಯುದ್ಧದ ಅಂತ್ಯದ ಮೂಲಕ. ಕಾಶಿ ನಗರದಲ್ಲಿ ದುಷ್ಟ ಯಾಸ್ಕಿನ್ ಆಡಳಿತವಿರುತ್ತದೆ. ಒಳಿತಿನ ವಿರೋಧಿ ಯಾಸ್ಕಿನ್, ಕಾಂಪ್ಲೆಕ್ಸ್ ಹೆಸರಿನ ಭವ್ಯ, ಸುಸಜ್ಜಿತ ಪ್ರಪಂಚವನ್ನೇ ಕಟ್ಟಿಕೊಂಡಿದ್ದಾನೆ. ಅಲ್ಲಿ ಅವನಿಗಾಗಿ ದುಡಿಯುವ ಸೈನ್ಯವಿದೆ, ರೋಬೋಟ್​ಗಳಿವೆ. ವಿಜ್ಞಾನಿಗಳಿದ್ದಾರೆ. ಪ್ರಯೋಗ ಶಾಲೆಯಿದೆ. ಗರ್ಭ ಧರಿಸಬಲ್ಲ ಯುವತಿಯರನ್ನು ಕರೆದುಕೊಂಡು ಬಂದು ಪ್ರಯೋಗಶಾಲೆ ಮೂಲಕ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತದೆ. ಯಾರ ಗರ್ಭದಲ್ಲಿ ‘ಕಲ್ಕಿ’ ಜನಿಸಲಿದ್ದಾನೆಯೋ ಆ ಗರ್ಭದ ಅಂಶವನ್ನು ಯಾಸ್ಕಿನ್​ ತನ್ನ ದೇಹಕ್ಕೆ ಇಂಜೆಕ್ಟ್​ ಮಾಡಿಕೊಂಡು ಅಮರತ್ವ ಪಡೆವ ಆಲೋಚನೆಯಲ್ಲಿದ್ದಾನೆ. ಈಗಾಗಲೇ ಆತ 2500 ಸಾವಿರ ವರ್ಷ ಬದುಕಿದ್ದಾನೆ. ಆದರೆ ಎಲ್ಲವೂ ಯಾಸ್ಕಿನ್ ಅಂದುಕೊಂಡಂತೆ ನಡೆಯುವುದಿಲ್ಲ. ‘ಕಲ್ಕಿ’ಯನ್ನು ಗರ್ಭದಲ್ಲಿ ಇರಿಸಿಕೊಂಡಿರುವ ಸುಮತಿ ಅಲ್ಲಿಂದ ತಪ್ಪಿಸಿಕೊಳ್ತಾಳೆ.

ಸಿನಿಮಾದಲ್ಲಿ ಪ್ರಭಾಸ್ ಭೈರವನ ಪಾತ್ರದಲ್ಲಿ ನಟಿಸಿದ್ದಾರೆ. ಕಾಶಿ ನಗರದಲ್ಲಿ ಪ್ರಭಾಸ್ ಒಬ್ಬ ಬೌಂಟಿ ಹಂಟರ್. ಹಣಕ್ಕಾಗಿ ಯಾವುದೇ ಕೆಲಸ ಮಾಡಲು ಸಿದ್ಧ. ಒಳ್ಳೆಯ ಫೈಟರ್, ಈ ವರೆಗೆ ಒಂದೂ ಸಹ ಫೈಟ್ ಸೋತಿಲ್ಲದವ. ಎಲ್ಲವೂ ದೊರೆಯುವ ಭವ್ಯ ಕಾಂಪ್ಲೆಕ್ಸ್ ಸೇರಬೇಕೆಂಬ ಆಸೆ ಅವನದ್ದು. ಕಾಂಪ್ಲೆಕ್ಸ್​ನಿಂದ ತಪ್ಪಿಸಿಕೊಂಡ ಗರ್ಭಿಣಿ ಸುಮತಿಯನ್ನು ಹುಡುಕಿಕೊಟ್ಟರೆ ಭೈರವನಿಗೆ ಕಾಂಪ್ಲೆಕ್ಸ್​ಗೆ ಪ್ರವೇಶ ದೊರೆಯುತ್ತದೆ. ಆದರೆ ಅದು ಸುಲಭವಲ್ಲ, ಸುಮತಿಗೆ ಕಾವಲಿರುವುದು ಸಾಕ್ಷಾತ್ ದ್ರೋಣಚಾರ್ಯ ಪುತ್ರ ಅಶ್ವತ್ಥಾಮ. ಅಂತಿಮ ವಿಜಯ ಯಾರಿಗೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಪ್ರಭಾಸ್​ರಷ್ಟೆ ಅಥವಾ ಅವರಿಗಿಂತಲೂ ತುಸು ಹೆಚ್ಚು ತೂಕದ ಪಾತ್ರವೇ ಅಮಿತಾಬ್ ಬಚ್ಚನ್ ಅವರಿಗಿದೆ. ಸಿನಿಮಾದ ಬಹುತೇಕ ಭಾಗದಲ್ಲಿ ಪ್ರಭಾಸ್​ಗಿಂತಲೂ ಹೆಚ್ಚು ಚಪ್ಪಾಳೆ ಗಿಟ್ಟಿಸುತ್ತಾರೆ ಬಚ್ಚನ್.

ದೀಪಿಕಾ ಪಡುಕೋಣೆಯವರದ್ದು ಮೆದುವಾದ ಪಾತ್ರ, ಅದಕ್ಕೆ ತಕ್ಕಂತೆ ದೀಪಿಕಾ ನಟಿಸಿದ್ದಾರೆ. ಸಿನಿಮಾದಲ್ಲಿ ಅತಿಥಿ ಪಾತ್ರಗಳ ದೊಡ್ಡ ಪಟ್ಟಿಯೇ ಇದೆ. ಸಿನಿಮಾದಲ್ಲಿ ನಾಗ್ ಅಶ್ವಿನ್ ಗ್ರಾಫಿಕ್ಸ್​ ಬಳಸಿರುವ ರೀತಿ ಅತ್ಯದ್ಭುತ. ಸೆಟ್​ಗಳು, ಬಳಸಿರುವ ಕಲರ್ ಗ್ರೇಡಿಂಗ್ ಎಲ್ಲವೂ ಹಾಲಿವುಡ್ ಸಿನಿಮಾ ಮೀರಿಸುವಂತಿದೆ. ಸಿನಿಮಾ ಮುಗಿದ ಬಳಿಕವೂ ಕೆಲವು ದೃಶ್ಯಗಳು ನೆನಪಿನಲ್ಲಿ ಉಳಿದು ಕಾಡುತ್ತವೆ ಅಂದರೆ ಕಲ್ಕಿ ಸಿನಿಮಾ ಪ್ರಭಾವ ಪ್ರೇಕ್ಷಕರ ಮೇಲೆ ಅಷ್ಟು ಬೀರಿದೆ ಅಂತಾ. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ಇದು ಬರೀ ಸಿನಿಮಾ ಅಲ್ಲ, ಭಾರತದ ಹೆಮ್ಮೆ ಅಂತಿದ್ದಾರೆ.

Shwetha M