ಕಲ್ಕಿಯಲ್ಲಿ ಕನ್ನಡಿಗ ನಟರಿಲ್ಲ ಯಾಕೆ? – ಕಾಸು ಬೇಕು.. ಕನ್ನಡಿಗರು ಬೇಡ್ವಾ?
ಸಿಟ್ಟಾಗಿದ್ದೇಕೆ ಕನ್ನಡ ಪ್ರೇಕ್ಷಕರು?

ಕಲ್ಕಿಯಲ್ಲಿ ಕನ್ನಡಿಗ ನಟರಿಲ್ಲ ಯಾಕೆ? – ಕಾಸು ಬೇಕು.. ಕನ್ನಡಿಗರು ಬೇಡ್ವಾ?ಸಿಟ್ಟಾಗಿದ್ದೇಕೆ ಕನ್ನಡ ಪ್ರೇಕ್ಷಕರು?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಚಿತ್ರ ಮಂದಿರಗಳಲ್ಲಿ ಅಬ್ಬರಿಸ್ತಿದೆ.. ಬಾಕ್ಸ್ ಆಫೀ‌ಸ್ ನಲ್ಲಿ ಧೂಳೆಬ್ಬಿಸಿದೆ. ಇಡೀ ಚಿತ್ರರಂಗವನ್ನೇ ಅಲ್ಲಾಡಿಸುತ್ತಿದೆ ಕಲ್ಕಿ. ಪ್ರಭಾಸ್- ಅಮಿತಾಬ್ ಬಚ್ಚನ್ ಪರ್ಫಾರ್ಮೆನ್ಸ್ ಹಾಗೂ ನಾಗ್ ಅಶ್ವಿನ್ ಕಲ್ಪನೆ, ಮೇಕಿಂಗ್ ಅಬ್ಬಬ್ಬಾ ಎನ್ನುವಂತಿದೆ. ದೊಡ್ಡಮಟ್ಟದಲ್ಲಿ‌ ಕಲ್ಕಿ ಸದ್ದು ಮಾಡುವ ಸುಳಿವು ಸಿಕ್ಕಿದೆ. ಸಿನಿಮಾ‌ ನೋಡಿದವರೆಲ್ಲಾ ಇದು ಪಕ್ಕಾ ಯೂನಿವರ್ಸಲ್ ಮೂವಿ. ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ನಲ್ಲಿದೆ ಎನ್ನುತ್ತಿದ್ದಾರೆ. ಇಂಥಾ ಅಲ್ಟಿಮೇಟ್ ಸಿನಿಮಾದ ಮೇಲೆ ಕನ್ನಡಿಗರು ಮುನಿಸಿಕೊಂಡಿದ್ದಾರೆ.. ಸಿನಿಮಾ ನೋಡಿದ ಕನ್ನಡಿಗರು ಕೆರಳಿದ್ದಾರೆ.

ಕಲ್ಕಿ ಸಿನಿಮಾದಲ್ಲಿ ಪ್ರಮುಖವಾಗಿ ಮಾನವ ಸಮಾಜವನ್ನು ಮೀರಿದ ಲೋಕವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಸುಮಾರು 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ರಿಲೀಸ್‌ ಆದ ಒಂದೇ ದಿನದಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದ್ದು, ವಿಶ್ವದಾದ್ಯಂತ 115 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನು ಈ ಸಿನಿಮಾದಲ್ಲಿ ಊಹೆಗೂ ನಿಲುಕದ ವಿಷಯಗಳಿವೆ‌‌. ಪಾತ್ರಗಳ ಗೆಟಪ್, ಅವರು ಬಳಸುವ ವಾಹನಗಳೆಲ್ಲವೂ ವಿಶೇಷವಾಗಿದೆ. ಆ್ಯಕ್ಷನ್ ಸೀನ್‌ಗಳಂತೂ ಬೇರೆ ಲೆವೆಲ್‌ನಲ್ಲಿ ಮೂಡಿ ಬಂದಿದೆ. ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ನಿಂದಲೂ ಒಂದು ಕೈ ಮೇಲೆಯೇ ಇದೆ. ಈ ಸಿನಿಮಾದ ಪಾತ್ರಧಾರಿಗಳಷ್ಟೇ ಅಲ್ಲ ಕಲಾನಿರ್ದೇಶಕನ ಪಾತ್ರವೂ ಇಲ್ಲಿ ದೊಡ್ಡದಿದೆ. ನಿರ್ದೇಶಕರ ಕಲ್ಪನೆ ಹಾಗೂ ಅದನ್ನ ತೆರೆ ಮೇಲೆ ತಂದಿರುವ ರೀತಿ ಒಂಥರಾ ಸಾಧನೆಯೇ ಸರಿ. ಕಣ್ಣಿಗೆ ಕಾಣಿಸಿದ್ದನ್ನು, ನೋಡಿದ್ದನ್ನು ಅದ್ಹೇಗೋ ದೃಶ್ಯರೂಪಕ್ಕೆ ಇಳಿಸಿಬಿಡಬಹುದು. ಆದರೆ, ನಮ್ಮ ಊಹೆಯನ್ನೇ ನೋಡುಗನ ಎದೆಗಿಸಿಳಿಸುವುದು ಸಾಮಾನ್ಯ ವಿಷಯವಲ್ಲ. ಆದ್ರೆ ಅದನ್ನು ಅಷ್ಟೇ ನೈಜವಾಗಿ ನೋಡುಗರಿಗೆ ಆಕರ್ಷಿಸುವಂತೆ ಅನಿಲ್‌ ಜಾಧವ್‌ ಮತ್ತು ಸಂತೋಷ್‌ ಶೆಟ್ಟಿ ಕೆಲಸ ಮಾಡಿದ್ದಾರೆ.

ಇನ್ನು  ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ದಕ್ಷಿಣ ಭಾರತದ ಹೆಮ್ಮೆ ಎಂದೇ ಕರೆಸಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಇಲ್ಲಿನವರೇ ಸೇರಿ ಮಾಡಿದ ಸಿನಿಮಾಯಿದು. ಪ್ಯಾನ್‌ ಇಂಡಿಯಾ ಸಿನಿಮಾ ಎಂದ ಬಳಿಕ, ಚಿತ್ರತಂಡ ಎಲ್ಲ ಭಾಷೆಯ ಪ್ರಮುಖ ಸ್ಟಾರ್‌ ನಟನನ್ನು ಚಿತ್ರಕ್ಕೆ ಕರೆತರುವುದು ಸಹಜ. ಬಾಲಿವುಡ್‌ನ ಸ್ಟಾರ್‌ ಕಲಾವಿದರಾದ ಅಮಿತಾಬ್‌ ಬಚ್ಚನ್‌ ನಟನೆಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ಈ ಸಿನಿಮಾ ಬಿಗ್‌ಬಿಗೆ ಒಳ್ಳೇ ಮೈಲೇಜ್ ಕೂಡಾ ನೀಡಿದೆ. ದೀಪಿಕಾ ಪಡುಕೋಣೆಯಂತೂ ತಾಯ್ತನದ ತೃಪ್ತಿಯಲ್ಲಿರೋದು ಸಿನಿಮಾದಲ್ಲಿ ಕಾಣ್ತಿದೆ. ದಿಶಾ ಪಟಾಣಿ ಹಾಡೊಂದರಲ್ಲೇ ಮ್ಯಾಜಿಕ್ ಮಾಡಿದೆ. ತಮಿಳಿನ ಸ್ಟಾರ್‌ ನಟ ಕಮಲ್ ಹಾಸನ್ ನಟನೆಯಂತೂ ಇಡೀ ಸಿನಿಮಾದ ಹೈಲೆಟ್ಸ್. ವಿಜಯ್ ದೇವರಕೊಂಡ ಗೆಸ್ಟ್ ರೋಲ್ ನಲ್ಲೇ ಕಮಾಲ್ ಮಾಡಿದ್ದಾರೆ. ಮಾಲಿವುಡ್‌ ಚಿತ್ರರಂಗದಿಂದ ದುಲ್ಖರ್‌ ಸಲ್ಮಾನ್‌ ಸಹ ಅತಿಥಿ ಪ್ರಾತ್ರದಲ್ಲಿ ಬಂದು ಹೋಗಿದ್ದಾರೆ. ಮಾಲಿವುಡ್‌ ನಿಂದ ಅನ್ನಾ ಬೆನ್‌, ಬೆಂಗಾಲಿ ನಟ ಸ್ವಸ್ಥ ಚಟರ್ಜಿ‍ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಆದ್ರೆ ಸ್ಯಾಂಡಲ್‌ವುಡ್‌ನ ಒಬ್ಬರೇ ಒಬ್ಬ ಕಲಾವಿದರೂ ಈ ಪ್ಯಾನ್‌ ಇಂಡಿಯಾ ಚಿತ್ರದ ಭಾಗವಾಗಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಕೆಲವರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ನಿಮಗೆ ಬರೀ ಕಾಸಷ್ಟೇ ಬೇಕೇ ಹೊರತು, ಇಲ್ಲಿನ ಕಲಾವಿದರನ್ನೂ ಸಿನಿಮಾದಲ್ಲಿ ಬಳಸಿಕೊಳ್ಳಬಹುದಿತ್ತಲ್ಲವೇ ಎಂದು ಪ್ರಶ್ನೆ ಮಾಡತೊಡಗಿದ್ದಾರೆ. ಸೌತ್‌ನ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಕೆಲವರು ಕಲ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದವರು ಏಕಿಲ್ಲ ಎಂದು ನಿರ್ಮಾಣ ಸಂಸ್ಥೆಯ ವಿರುದ್ಧ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗಿನ ಸಿನಿಮಾಗಳಿಗೆ ಕರ್ನಾಟಕದಲ್ಲಿಯೂ ದೊಡ್ಡ ಮಾರುಕಟ್ಟೆ ಇದೆ. ಇಲ್ಲಿಂದಲೂ ಕೋಟಿ ಕೋಟಿ ಹಣವನ್ನು ತೆಲುಗು ಸಿನಿಮಾಗಳು ಬಾಚಿಕೊಳ್ಳುತ್ತವೆ. ಕನ್ನಡ ಅವತರಣಿಕೆಗಿಂತ ಹೆಚ್ಚು ಮೂಲ ತೆಲುಗು ಚಿತ್ರವನ್ನೇ ಇಲ್ಲಿನ ಪ್ರೇಕ್ಷಕ ನೋಡುತ್ತಾನೆ. ಅದೇ ರೀತಿ ಕಲ್ಕಿ ಚಿತ್ರಕ್ಕೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡ ಓಪನಿಂಗ್‌ ಸಿಕ್ಕಿದೆ. ಆದ್ರೆ ಇದೀಗ ಕನ್ನಡಿಗರು ಸ್ಯಾಂಡಲ್ ವುಡ್ ನಟರು ನಿಮ್ಗೆ ಯಾಕೆ ಬೇಡ ಅಂತಾ ಪ್ರಶ್ನೆ ಮಾಡ್ತಿದ್ದಾರೆ.. ಕಳೆದ ವರ್ಷ ತೆರೆಕಂಡಿದ್ದ ಸೂಪರ್ ಸ್ಟಾರ್ ರಜನಿ ಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.. ಆದ್ರೆ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಾತ್ರ ಕನ್ನಡ ನಟರಿಗೆ ಅವಕಾಶ ಏಕಿಲ್ಲ ಅನ್ನೋದು ಕನ್ನಡಿಗರ ಪ್ರಶ್ನೆ..

Shwetha M