ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಎಎಸಿ ಸಿಮೆಂಟ್ ಕಾರ್ಖಾನೆ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆ
ಅದಾನಿ ಒಡೆತನದ ಎಎಸಿ ಸಿಮೆಂಟ್ ಕಾರ್ಖಾನೆ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ರಮೇಶ್ ಪವಾರ್(47) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರಮೇಶ್, ಚಿತ್ತಾಪುರ ಮಾಜಿ ಶಾಸಕ ದಿ.ವಾಲ್ಮಿಕಿ ನಾಯಕ್ ಅಳಿಯನಾಗಿದ್ದು, ಅದಾನಿ ಗ್ರೂಪ್ ಮಾಲಿಕತ್ವದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದರು. ಆದ್ರೆ, ಕಾರ್ಖಾನೆ ಆಡಳಿತ ಮಂಡಳಿಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತ ರಮೇಶ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದು, ಬಳಿಕ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರ್ಖಾನೆ ಹಿರಿಯ ಅಧಿಕಾರಿಗಳೇ ತನ್ನ ಸಾವಿಗೆ ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ವಾಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಎಂಜಲು ತಟ್ಟೆ ತಾಗಿತೆಂದು ವೇಯ್ಟರ್‌ನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಅತಿಥಿಗಳು!
ಕಳೆದ 26 ವರ್ಷಗಳಿಂದ ಎಸಿಸಿ ಕಂಪನಿಯಲ್ಲಿ ಇಂಜಿನಿಯರಿಂಗ್ ಆಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಪವಾರ್, ಕಾರ್ಮಿಕರ ಸಮಸ್ಯೆಗಳ ವಿರುದ್ಧ ದನಿಯೆತ್ತಿದ್ದರೂ ಎನ್ನಲಾಗಿದೆ. ಕಂಪನಿಯ ಅಧಿಕಾರಿಗಳು ನಡೆಸುತ್ತಿದ್ದ ಕಾರ್ಮಿಕ ವಿರೋಧಿ ಚಟುವಟಿಕೆಗಳ ವಿರುದ್ಧ ಮಾತನಾಡಿದ್ದೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಲು ಕಾರಣ ಎಂಬುದು ಅಮೃತ ರಮೇಶ್ ಪವಾರ್ ಬರೆದಿಟ್ಟಿರುವ ಡೆತ್ ನೋಟ್ ನಿಂದ ಗೊತ್ತಾಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಎಸಿಸಿ ಆಡಳಿತ ಕಾರ್ಮಿಕರನ್ನು ವಿ ಆರ್ ಎಸ್ (ಸ್ವಯಂ ನಿವೃತ್ತಿ) ಹೆಸರಿನಲ್ಲಿ ಕೆಲಸದಿಂದ ತೆಗೆದ ಹಾಕುತ್ತಿದ್ದು, ಇಂಜಿನಿಯರಗಳೂ ಕೂಡ ಸ್ವಯಂ ನಿವೃತ್ತಿಯ ಕತ್ತಿಗೆ ಬಲಿಯಾಗಿದ್ದಾರೆ. ಸ್ವಯಂ ನಿವೃತ್ತಿ ಘೋಷಿಸಬೇಕು ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಒತ್ತಡ ಎಸಿಸಿ ಆಡಳಿತ ಮಂಡಳಿಯಿಂದ ಬರುತ್ತಿತ್ತು. ಕೆಲಸ ಕಳೆದು ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ನನ್ನ ಸಾವಿಗೆ ಎಸಿಸಿ ಘಟಕ ವ್ಯವಸ್ಥಾಪಕ ಮತ್ತು ಎಚ್ ಆರ್ ವಿಭಾಗದ ವಿವಿಧ ಅಧಿಕಾರಿಗಳು ಕಾರಣ ಎಂದು ರಮೇಶ್ ಪವಾರ್ ತಮ್ಮ ಡೆತ್ ನೋಟ್ ನಲ್ಲಿ ಹೆಸರುಗಳ ಸಮೇತ ಬರೆದಿಟ್ಟಿದ್ದಾರೆ.
ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎಸಿಸಿ ಕಂಪನಿಯ ನೂರಾರು ಜನ ಕಾರ್ಮಿಕರು ಸೇರಿದ್ದು ಕಂಪನಿಯ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಕಾರಣರಾದ ಎಸಿಸಿ ಕಂಪೆನಿಯ ಅಧಿಕಾರಿಗಳನ್ನು ಬಂಧಿಸುವವರೆಗೂ ಶವ ಕೆಳಗಿಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪರಿಣಾಮ ವಾಡಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ