ತೊಗರಿ ಬೆಳೆಗಾರರ ಕಿಚ್ಚಿಗೆ ಕಲಬುರಗಿ ಬಂದ್ – ಮೋದಿಗೂ ತಟ್ಟುತ್ತಾ ಎಫೆಕ್ಟ್..?

ತೊಗರಿ ಬೆಳೆಗಾರರ ಕಿಚ್ಚಿಗೆ ಕಲಬುರಗಿ ಬಂದ್ – ಮೋದಿಗೂ ತಟ್ಟುತ್ತಾ ಎಫೆಕ್ಟ್..?

ಮಳೆಯಿಂದ ಕಂಗೆಟ್ಟಿದ್ದ ತೊಗರಿ ಬೆಳೆಗಾರರಿಗೆ ಈಗ ಹೊಸ ಸಮಸ್ಯೆ ಶುರುವಾಗಿದೆ. ವರುಣನ ಅಬ್ಬರದ ನಡುವೆ ಅಳಿದುಳಿದ ಬೆಳೆಯೂ ನಟೆರೋಗಕ್ಕೆ ತುತ್ತಾಗಿದ್ದು ದಿಕ್ಕೇ ತೋಚದಂತಾಗಿದೆ. ಹೀಗಾಗಿ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿ ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ:ಮುಂಬೈ ದಾಳಿ ರೂವಾರಿ ಜಾಗತಿಕ ಉಗ್ರನೆಂದು ಘೋಷಣೆ – ಭಾರತಕ್ಕೆ ದೊಡ್ಡ ಯಶಸ್ಸು, ಚೀನಾಗೆ ತೀವ್ರ ಮುಖಭಂಗ

ಪ್ರತೀವರ್ಷ ತೊಗರಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗುತ್ತಿದ್ರು. ಆದ್ರೆ ಈ ಸಲ ಭಾರೀ ಮಳೆಯಿಂದ ಹೊಲಗಳಲ್ಲೇ ತೊಗರಿ ನಾಶವಾಗಿತ್ತು. ಅಳಿದುಳಿದ ಬೆಳೆಯನ್ನಾದ್ರೂ ಉಳಿಸಿಕೊಳ್ಳೋಣ ಅಂದ್ರೆ ನಟೆರೋಗ ವಕ್ಕರಿಸಿಕೊಂಡಿದೆ. ಇದ್ರಿಂದಾಗಿ ಕಾಳಾಗುವ ಮುನ್ನವೇ ಗಿಡಗಳು ಒಣಗಿಹೋಗಿವೆ. ಅದ್ರಲ್ಲೂ ರಾಜ್ಯದ ತೊಗರಿ ಕಣಜ ಅಂತಾ ಖ್ಯಾತಿ ಪಡೆದಿರೋ ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿದೆ. ಹೀಗಾಗಿ ಹಾಳಾಗಿರುವ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕಲಬುರಗಿ ನಗರ ಬಂದ್​ಗೆ ಕರೆ ನೀಡಿವೆ.  ಮುಂಜಾನೆ 5 ಗಂಟೆಯಿಂದಲೇ ನಗರದಲ್ಲಿ ಬಂದ್ ವಾತಾವರಣವಿದ್ದು, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ ಜೊತೆ ಚರ್ಚಿಸಿ ಪರಿಹಾರ ಕೊಡಿಸುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಬೇಡಿಕೆ ಇದೆ. ಪ್ರತೀವರ್ಷ ಬೇಡಿಕೆ ಇಲ್ಲದೆ ಕಂಗಾಲಾಗುತ್ತಿದ್ದ ರೈತರಿಗೆ ಈ ಸಲ ನಟೆರೋಗ ಚಿಂತೆಗೀಡು ಮಾಡಿದೆ. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಕಲಬುರಗಿ ಜಿಲ್ಲೆಯಲ್ಲೇ ಸುಮಾರು 80 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಟೆರೋಗದಿಂದ ಹಾಳಾಗಿದೆ. ಹೀಗಾಗಿ ಪ್ರತೀ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ. ಈಗವರೆಗೂ ಸರ್ಕಾರ ಸ್ಪಂದಿಸದ ಕಾರಣ ರೈತರು ಬಂದ್ ದಾರಿ ತುಳಿದಿದ್ದು, ಈ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.

 

suddiyaana