ಕಬಡ್ಡಿ ಆಟಗಾರನ ಪ್ರಾಣ ತೆಗೆಯಿತಾ ಲೋನ್ ಆ್ಯಪ್ ಕಿರುಕುಳ ? – ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರಿಂದ ಜೀವ ಬಿಟ್ಟ ಪ್ರತಿಭಾವಂತ ಯುವಕ

ಕಬಡ್ಡಿ ಆಟಗಾರನ ಪ್ರಾಣ ತೆಗೆಯಿತಾ ಲೋನ್ ಆ್ಯಪ್ ಕಿರುಕುಳ ? – ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರಿಂದ ಜೀವ ಬಿಟ್ಟ ಪ್ರತಿಭಾವಂತ ಯುವಕ

ಯುವ ಕಬಡ್ಡಿ ಆಟಗಾರ. ಇನ್ನೂ ಯಶಸ್ಸಿನ ದಾರಿ ಮುಂದೆ ಕಾಯುತ್ತಿತ್ತು. ಜಿಲ್ಲಾಮಟ್ಟದಲ್ಲಿ ಕಬಡ್ಡಿ ಆಟಗಾರನಾಗಿ ಎಲ್ಲರ ಮೆಚ್ಚುಗೆಗೂ ಪಾತ್ರನಾಗಿದ್ದ. ಈಗಿನ್ನೂ ಕೇವಲ 24 ವರ್ಷ ವಯಸ್ಸು. ಕಬಡ್ಡಿ ಆಟವೇ ಜೀವವಾಗಿತ್ತು. ಇದರ ಜೊತೆಗೆ ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಕೂಡಾ ಮಾಡುತ್ತಿದ್ದ. ಆದರೆ, ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುತ್ತದೆ ಎಂಬಂತೆ ಯುವ ಆಟಗಾರನ ಪಾಲಿಗೆ ಲೋನ್ ಆ್ಯಪ್ ಕಿರುಕುಳ ಬದುಕಲೇ ಬಿಡಲಿಲ್ಲ. ಲೋನ್ ಆ್ಯಪ್ ಕಿರುಕುಳ ಎಲ್ಲಿಯವರೆಗೆ ಇತ್ತು ಅಂದರೆ ಸ್ವರಾಜ್ ಕೊನೆಗೆ ವಿಧಿಯಿಲ್ಲದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದ.

ಇದನ್ನೂ ಓದಿ: ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಯುವ ಕಬಡ್ಡಿ ಆಟಗಾರ 24 ವರ್ಷದ ಸ್ವರಾಜ್ ಜಿಲ್ಲಾ ಮಟ್ಟದಲ್ಲಿ ಕಬಡ್ಡಿಯಲ್ಲಿ ಪ್ರಸಿದ್ದಿಯಾಗಿದ್ದ. ಮುಂದೆ ರಾಜ್ಯಮಟ್ಟದಲ್ಲೂ ಬೆಳೆಯುವ ಅವಕಾಶವೂ ಸಾಕಷ್ಟಿತ್ತು. ಆದರೆ, ಆ.31 ರಂದು ಸ್ವರಾಜ್, ಸ್ನಾನದ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಸ್ವರಾಜ್ ಆತ್ಮಹತ್ಯೆಗೆ ಶರಣಾಗಿದ್ದು ನೋಡಿ ಹೆತ್ತವರು ಆಘಾತಕ್ಕೊಳಗಾಗಿದ್ದರು. ಇನ್ನು ಸ್ನೇಹಿತರಂತೂ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕಟುಸತ್ಯವನ್ನು ಅರಗಿಸಿಕೊಳ್ಳಲಾರದೇ ಒದ್ದಾಡುತ್ತಿದ್ದರು. ಯಾಕೆಂದರೆ, ಸ್ವರಾಜ್ ಸಾಮಾನ್ಯ ಯುವಕರಂತೆ ಅಲ್ಲ. ಒಂದೆಡೆ ಕಬಡ್ಡಿ ಆಟ, ಮತ್ತೊಂದೆಡೆ ಖಾಸಗಿ ಕಂಪನಿಯಲ್ಲಿ ಕೆಲಸ, ಪ್ರತಿಭಾವಂತ ಜೊತೆ ಅಷ್ಟೇ ಗುಣವಂತ. ಕೊನೆಗೂ ಸ್ವರಾಜ್ ಸಾವಿಗೆ ಕಾರಣವೇನು ಅನ್ನೋದನ್ನು ಪೊಲೀಸರು ಬಯಲು ಮಾಡಿದ್ದಾರೆ. ಈ ವಿಚಾರ ತಿಳಿದು ಹೆತ್ತವರ ಜೊತೆ ಎಲ್ಲರೂ ಶಾಕ್ ಆಗಿದ್ದಾರೆ. ಯಾಕೆಂದರೆ, ಸ್ವರಾಜ್ ಸಾವಿಗೆ ಕಾರಣವಾಗಿದ್ದು ಲೋನ್ ಆ್ಯಪ್ ಕಿರುಕುಳ.

ಯವ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ವರಾಜ್ ತನ್ನ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದ. ಈ ಫೋಟೋವನ್ನು ಲೋನ್ ಆ್ಯಪ್‌ನವರು ‘Baby for sale’ಎಂದು ಎಡಿಟ್ ಮಾಡಿ ಸ್ವರಾಜ್ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ತಡೆಯಲಾಗದೇ ಆಗಸ್ಟ್ 30 ರಂದು 30 ಸಾವಿರ ರೂಪಾಯಿ ಕಟ್ಟಿದ್ದ. ಆದರೂ ಇನ್ನಷ್ಟು ಹಣ ಕೊಡಬೇಕೆಂದು ಆ.31 ರಂದು ಮಧ್ಯಾಹ್ನ 2 ಗಂಟೆಗೆ ಲೋನ್ ಌಪ್ ನವರು ವಿಪರೀತ ಕಿರುಕುಳ ನೀಡಿದ್ದಾರೆ. ಜೊತೆಗೆ ಡೆಡ್ ಲೈನ್ ಮೇಲೆ ಡೆಡ್‌ಲೈನ್ ನೀಡಿ ಮಾನಸಿಕವಾಗಿಯೂ ಟಾರ್ಚರ್ ನೀಡಿದ್ದಾರೆ. ಇದರಿಂದ ಒತ್ತಡ ತಾಳಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

suddiyaana