LSG ಮಾಲೀಕರಿಂದ ಪ್ರತಿಬಾರಿಯೂ ಮಾನಸಿಕ ಹಿಂಸೆ – ಕಹಿ ಅನುಭವವನ್ನು ವಿವರಿಸಿದ ಕೆ.ಎಲ್ ರಾಹುಲ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನೀಡಿದ ಮಾನಸಿಕ ಹಿಂಸೆ ಬಗ್ಗೆ ಕೊನೆಗೂ ಕೆ.ಎಲ್ ರಾಹುಲ್ ಬಾಯ್ಬಿಟ್ಟಿದ್ದಾರೆ. ಜೊತೆಗೆ ಕ್ರೀಡಾ ಹಿನ್ನೆಲೆ ಇಲ್ಲದ ಕಾರ್ಪೊರೇಟ್ ಮಾಲೀಕರ ಜೊತೆ ಕ್ರಿಕೆಟ್ ಸಂಬಂಧ ತುಂಬಾ ಕಷ್ಟಕರ ಅನ್ನೋದನ್ನು ಪರೋಕ್ಷವಾಗಿ ವಿವರಿಸಿ್ದ್ದಾರೆ.
ಇದನ್ನೂ ಓದಿ:ಕೊಹ್ಲಿ ಕಿಚ್ಚಿಗೆ ತುಪ್ಪ ಸುರಿದ ಗಂಭೀರ್ – 2013ರ IPL ಸಂಘರ್ಷದ ಸತ್ಯ ಬಯಲು
ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ತಮಗಾದ ಕಹಿ ಅನುಭವ, ಮಾನಸಿಕ ಯಾತನೆ, ದೈಹಿಕವಾಗಿಯೂ ವೇದನೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್. ಟೀಮ್ ಇಂಡಿಯಾ ಪರ 10 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರೂ ಆಗದಷ್ಟು ಮಾನಸಿಕ ಮತ್ತು ದೈಹಿಕ ಆಯಾಸ, ಕೇವಲ 2 ತಿಂಗಳು ಐಪಿಎಲ್ ಆಡುವುದರಿಂದ ಆಗುತ್ತಿತ್ತು ಎಂದು ಕೆ.ಎಲ್ ರಾಹುಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ, ಅವರ ವಿರುದ್ಧ ತನಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ತರಬೇತುದಾರರು ಮತ್ತು ಆಯ್ಕೆಗಾರರಿಗೆ ಮಾತ್ರ ಉತ್ತರದಾಯಿಯಾಗಿರುತ್ತೇವೆ. ಏಕೆಂದರೆ ಅವರಿಗೆ ಆಟದ ಸೂಕ್ಷ್ಮತೆಗಳು ತಿಳಿದಿರುತ್ತವೆ. ಆದರೆ ಐಪಿಎಲ್‌ನಲ್ಲಿ ಪ್ರತಿ ಪಂದ್ಯ ಮುಗಿದ ತಕ್ಷಣ ಮಾಲೀಕತ್ವದ ಮಟ್ಟದಲ್ಲಿ ಸಭೆಗಳು, ವಿಮರ್ಶೆಗಳು ಆರಂಭವಾಗುತ್ತವೆ. ಎದುರಾಳಿ ತಂಡ 200 ರನ್ ಹೊಡೆದಾಗ ನಾವು ಯಾಕೆ 120 ಕ್ಕೆ ಆಲೌಟ್ ಆದೇವು?, ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿರಿ?, ಆ ಆಟಗಾರನಿಗೆ ಆ ರೋಲ್ ಏಕೆ ನೀಡಿದಿರಿ? ಎಂಬಿತ್ಯಾದಿ ವಿಚಿತ್ರ ಪ್ರಶ್ನೆಗಳಿಗೆ ನಾವು ನಿರಂತರವಾಗಿ ವಿವರಣೆ ನೀಡುತ್ತಲೇ ಇರಬೇಕಾಗುತ್ತಿತ್ತು. 10 ತಿಂಗಳುಗಳು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಕ್ಕಿಂತ ಹೆಚ್ಚು ಮಾನಸಿಕ, ದೈಹಿಕ ಬಳಿಕೆಯನ್ನು ನಾನು ಅನುಭವಿಸಿದ್ದೆ. ನನ್ನ ನಿರ್ಧಾರ, ಆಟಗಾರರ ಆಯ್ಕೆ, ಹೀಗೆ ಪ್ರತಿಯೊಂದಕ್ಕೂ ನಾನು ವಿವರಣೆ ನೀಡಬೇಕಿತ್ತು. ಕ್ರೀಡಾ ಹಿನ್ನಲೆ ಇಲ್ಲದವರಿಗೆ ಇವೆಲ್ಲವನ್ನೂ ವಿವರಿಸಿ ಅರ್ಥ ಮಾಡಿಸುವುದು ಕಷ್ಟ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಐಪಿಎಲ್ 2024 ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋತಿತ್ತು. ಆ ಪಂದ್ಯ ಮುಗಿದ ತಕ್ಷಣ ಮೈದಾನದಲ್ಲೇ ಲೈವ್ ಕ್ಯಾಮೆರಾಗಳ ಮುಂದೆಯೇ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್. ರಾಹುಲ್ ಅವರ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಭಾರತ ತಂಡವನ್ನು ಮುನ್ನಡೆಸಿದ ಅನುಭವವಿರುವ ಹಿರಿಯ ಆಟಗಾರನಿಗೆ ಮೈದಾನದಲ್ಲೇ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕೆ ಗೋಯೆಂಕಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಮತ್ತು ದಿಗ್ಗಜರು ಆಕ್ರೋಶ ಹೊರಹಾಕಿದ್ದರು.

ನೋಡಿರಿ

