ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ತೊರೆದ ಅಣ್ಣಾಮಲೈ
ಇನ್ನು ಮುಂದೆ ಕೇವಲ ಪಕ್ಷದ ಸ್ವಯಂಸೇವಕ ಎಂದ ಸಿಂಗಂ

ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಕೆ. ಅಣ್ಣಾಮಲೈ ಘೋಷಿಸಿದ್ದಾರೆ. ಮುಂದುವರೆದು, ತಾವು ಪಕ್ಷದ ಕೇವಲ ಸ್ವಯಂಸೇವಕರಾಗಿಯೇ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಭೇಟಿಯಾದ ಅಣ್ಣಾಮಲೈ, “ನಾನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ನಲ್ಲಿ ಇಲ್ಲ” ಎಂದು ತಿಳಿಸಿದರು. ಮುಂದುವರೆದು, “ನಾನು ಸಾಮಾನ್ಯ ಸ್ವಯಂಸೇವಕನಾಗಿ ಮುಂದುವರಿಯುತ್ತೇನೆ. ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ಮುಂದೊಂದು ದಿನ ಖಂಡಿತವಾಗಿಯೂ ಅರಳುತ್ತದೆ. ಒಬ್ಬ ಸ್ವಯಂಸೇವಕನಾಗಿ, ಪಕ್ಷವು ನಿಯೋಜಿಸಿದ ಕೆಲಸವನ್ನು ನಾನು ಪೂರ್ಣಗೊಳಿಸುತ್ತೇನೆ” ಎಂದು ಅವರು ಹೇಳಿದರು.
ಮುಂದುವರೆದು, ನಾನು ಎಂದಿಗೂ ತಮಿಳುನಾಡು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ದೆಹಲಿಗೂ ಹೋಗುವುದಿಲ್ಲ ಎಂದು ಹೇಳಿದರು. ತಮಿಳುನಾಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಅನುಮೋದಿಸಿಲ್ಲ. ಜೊತೆಗೆ ಪಕ್ಷಕ್ಕೆ ಉಜ್ವಲ ಭವಿಷ್ಯ ಸಿಗಲಿ ಎಂದು ನಾನು ಬಯಸುತ್ತೇನೆ. ಈ ಪಕ್ಷದ ಬೆಳವಣಿಗೆಗಾಗಿ ಅನೇಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ನಾನು ಯಾವಾಗಲೂ ಈ ಪಕ್ಷಕ್ಕೆ ಶುಭ ಹಾರೈಸುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಏತನ್ಮಧ್ಯೆ, ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಲು ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಡುತ್ತದೆ ಎನ್ನಲಾಗುತ್ತಿರುವ ನಡುವೆಯೇ ಈ ಘೋಷಣೆ ಹೊರ ಬಂದಿದೆ.