NOTAವೇ ಪಾಠ ಎಂದಿದ್ದೇಕೆ ತಿಮರೋಡಿ?  – ಕರಾವಳಿಯಲ್ಲಿ ಈ ಬಾರಿ ಹೊಸ ಇತಿಹಾಸ

NOTAವೇ ಪಾಠ ಎಂದಿದ್ದೇಕೆ ತಿಮರೋಡಿ?  – ಕರಾವಳಿಯಲ್ಲಿ ಈ ಬಾರಿ ಹೊಸ ಇತಿಹಾಸ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕಾವು ಜೋರಾಗೇ ಇದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಬ್ಬರದ ರೋಡ್ ಶೋ ಮೂಲಕ ಮತಬೇಟೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡ ಮೋದಿಯವರ ಪಕ್ಕದಲ್ಲೇ ನಿಂತು ರೋಡ್ ಶೋ ಮೂಲಕ ಜನಮನ ಗೆಲ್ಲೋ ಪ್ರಯತ್ನ ಮಾಡಿದ್ದಾರೆ. ಆದ್ರೆ ಈ ಚುನಾವಣೆ ಮತ್ತು ಬಿಸಿಲ ಬಿಸಿಗಿಂತ್ಲೂ ಕರಾವಳಿ ಜಿಲ್ಲೆಯಲ್ಲಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ನಡೆಯುತ್ತಿರೋ ಹೋರಾಟವೇ ಹಲ್​ಚಲ್ ಸೃಷ್ಟಿಸಿದೆ. ನೋಟ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದ್ದು, ಲಕ್ಷಾಂತರ ಮಂದಿ ನೋಟಕ್ಕೆ ಮತ ಹಾಕಲು ಒಗ್ಗೂಡುತ್ತಿದ್ದಾರೆ. 2 ಲಕ್ಷಕ್ಕೂ ಅಧಿಕ ಮತಗಳು ನೋಟಾಗೆ ಬೀಳುವ ಸಾಧ್ಯತೆ ಇದ್ದು, ರಾಜಕೀಯ ಚಿತ್ರಣವೇ ಬದಲಾಗುವ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯವ್ರೇ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಸೌಜನ್ಯ ಪರ ಹೋರಾಟ ಎಲ್ಲಿಗೆ ಬಂತು..? ನೋಟ ಅಭಿಯಾನಕ್ಕೆ ಸಿಕ್ಕಿರೋ ರೆಸ್ಪಾನ್ಸ್ ಎಂಥಾದ್ದು..? ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದೇನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಸೌಜನ್ಯಗಾಗಿ ನೋಟಾ ಅಭಿಯಾನ! – ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆ!

2012 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಎಂಬ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದ್ರೆ ಹತ್ಯೆ ಪ್ರಕರಣದ ಅಸಲಿ ಹಂತಕರು ಮಾತ್ರ ಈವರೆಗೂ ಸಿಕ್ಕಿ ಬಿದ್ದಿಲ್ಲ. ದಶಕದ ಹಿಂದೆ ನಡೆದಿದ್ದ ಈ ಕೊಲೆ ಪ್ರಕರಣದ ಅಸಲಿ ಆರೋಪಿಗಳ ಬಂಧನಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಜಸ್ಟೀಸ್ ಫಾರ್ ಸೌಜನ್ಯ ಕೂಗು ಕೇಳುತ್ತಲೇ ಇದೆ. ಆದ್ರೆ ಸರ್ಕಾರಗಳು ಬದಲಾದ್ರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೌಜನ್ಯ ಕೂಗು ಮತ್ತೆ ಎದ್ದಿದೆ. ನೋಟಕ್ಕೆ ಮತ ಒತ್ತುವಂತೆ ಅಭಿಯಾನ ನಡೆಯುತ್ತಿದೆ. ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ನೋಟ ಅಭಿಯಾನದ  ಬಗ್ಗೆ ಪ್ರಸ್ತಾಪಿಸಿದ್ದಾರೆ.

ನೋಟಾಗೆ 2ಲಕ್ಷಕ್ಕೂ ಹೆಚ್ಚು ಮತ! 

ಪುತ್ತೂರಿನಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಅವರು ನೋಟಾ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿನಿ ಸೌಜನ್ಯ ಸಾವಿಗೆ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಈಗಾಗಲೇ ಈ ಕುರಿತು ರಾಜ್ಯದಾದ್ಯಂತ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದೇವೆ, ಈ ಹೋರಾಟದ ಮುಂದಿನ ಭಾಗವಾಗಿ ಈ ಬಾರಿ ನೋಟಾ ಅಭಿಯಾನವನ್ನು ಆರಂಭಿಸಿದ್ದೇವೆ. ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನೋಟಾ ಮತವನ್ನು ಅತೀ ಹೆಚ್ಚು ಚಲಾಯಿಸುವ ಮೂಲಕ ನಮಗೆ ನ್ಯಾಯ ಪಡೆದುಕೊಳ್ಳುತ್ತೇವೆ. ಎಲ್ಲಿ ಹೆಚ್ಚು ನೋಟಾ‌ ಮತ ಚಲಾವಣೆಯಾಗುತ್ತೋ ಆ ಕ್ಷೇತ್ರ ದೇಶದ ಗಮನ ಸೆಳೆಯುತ್ತೆ. ಸಮಸ್ಯೆಗೆ ಪರಿಹಾರವೂ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. ಈ ಬಾರಿ ಸುಮಾರು ಒಂದೂವರೆ ಲಕ್ಷದಿಂದ 2 ಲಕ್ಷಕ್ಕೂ ಹೆಚ್ಚು ನೋಟಾ ಮತ ಬೀಳುವ ಸಾಧ್ಯತೆಯಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಂದೂ ಮುಖಂಡರನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಹಿಂದೂಗಳ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮಹೇಶ್ ತಿಮರೋಡಿ ವಾಗ್ದಾಳಿ ನಡೆಸಿದ್ದಾರೆ.

ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇ ಬೇಕು ಎಂದು ಹಠ ಹಿಡಿದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಚಳವಳಿ ಆರಂಭಿಸಿದ್ದರು. 2014 ರಲ್ಲಿ ಮೋದಿ ಪ್ರಧಾನಿಯಾದರೆ ಮಾತ್ರ ಸೌಜನ್ಯ ಹೋರಾಟಕ್ಕೆ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿಕೆ ನೀಡಿದ್ದ ತಿಮರೋಡಿಯವರು ಅಂದಿನ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು. ಆ ವರ್ಷ ಮೋದಿ ಪ್ರಧಾನಿಯೂ ಆದರು. ಈಗ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದು ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು, ಹಿಂದೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಸಕಾಲ ಎಂದು ನೋಟಾಗೆ ಕರೆ ನೀಡಿದ್ದಾರೆ. ಈಗಾಗ್ಲೇ ವ್ಯಾಪಕ ಬೆಂಬಲವೂ ಸಿಗುತ್ತಿದೆ. ಆದ್ರೆ ನೋಟಾಗೆ ಮತಗಳು ಬಿದ್ರೆ ಅದ್ರಿಂದ ಏನು ಉಪಯೋಗ ಅನ್ನೋ ಪ್ರಶ್ನೆಯೂ ಎದ್ದಿದೆ.

Shwetha M

Leave a Reply

Your email address will not be published. Required fields are marked *