ಸೌಜನ್ಯಗೆ ಸಿಗುತ್ತಾ ನ್ಯಾಯ.. – NOTAಗೆ ಬಿದ್ದ ಮತಗಳೆಷ್ಟು?

ಸೌಜನ್ಯಗೆ ಸಿಗುತ್ತಾ ನ್ಯಾಯ.. – NOTAಗೆ ಬಿದ್ದ ಮತಗಳೆಷ್ಟು?

ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸದ್ದು ಮಾಡಿರುವ ಕ್ಷೇತ್ರ ಅಂದ್ರೆ ಅದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಸೌಜನ್ಯ ಸಾವಿನ ನ್ಯಾಯಕ್ಕಾಗಿ ನೋಟಾ ಅಭಿಯಾನ ತೀವ್ರಗೊಂಡಿದ್ದರಿಂದ ರಾಜಕೀಯ ಲೆಕ್ಕಾಚಾರವೇ ತಲೆಕೆಳಗಾಗಿದೆ. ಇದೀಗ ಕರ್ನಾಟಕದಲ್ಲಿ ಮೊದಲ ಹಂತದ ಮತದಾನದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ವೋಟಿಂಗ್ ಆಗಿದೆ. ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೊಟೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಈ ಮೊದಲು ಬಹುತೇಕ ಬಿಜೆಪಿ ಕಡೆ ವಾಲುತ್ತಿದ್ದ ಸಮೀಕ್ಷೆಗಳು ಈ ಬಾರಿ 50-50ಗೆ ಬಂದು ನಿಂತಿದೆ. ಅದಕ್ಕೆ ಕಾರಣ ನೋಟಾ ಅಭಿಯಾನ ಮತ್ತು ಅಭ್ಯರ್ಥಿಗಳು. ಅಷ್ಟಕ್ಕೂ ಶುಕ್ರವಾರದ ವೋಟಿಂಗ್​ನಲ್ಲಿ ನೋಟಾಗೆ ಎಷ್ಟು ಮತ ಬಿದ್ದಿದೆ..? ನೋಟಾಗೆ ಮತಗಳು ಹೆಚ್ಚಾದ್ರೆ ಚುನಾವಣೆ ಫಲಿತಾಂಶ ಏನಾಗುತ್ತೆ..? ಯಾವ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗುತ್ತೆ..? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ರಾಜಸ್ಥಾನ ರಾಯಲ್ಸ್ ಗೆದ್ದರೆ ಪ್ಲೇ-ಆಫ್ ಸ್ಥಾನ ಖಚಿತ – ಕನ್ನಡಿಗ ಕೆ.ಎಲ್ ರಾಹುಲ್ ಮಾಡ್ತಾರಾ ಕಮಾಲ್?

ಹಿಂದುತ್ವದ ಪ್ರಯೋಗ ಶಾಲೆ ಅಂತಾನೇ ಕರೆಸಿಕೊಳ್ಳೋ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಲಕ್ಷ ಮತದಾರರಿದ್ದಾರೆ. ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮತ್ತು ಕಾಂಗ್ರೆಸ್​ನಿಂದ ಪದ್ಮರಾಜ್ ಕಣದಲ್ಲಿದ್ದಾರೆ. ಎರಡೂ ಪಕ್ಷಗಳು ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿರೋದ್ರಿಂದ ಭಾರೀ ಕುತೂಹಲ ಕೆರಳಿಸಿದೆ. ಅದಕ್ಕಿಂತ ವಿಶೇಷ ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಲ ಅಭ್ಯರ್ಥಿಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ಅಂದ್ರೆ ನೋಟಾ ಅಭಿಯಾನ. ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ವಿದ್ಯಾರ್ಥಿನಿ ಸೌಜನ್ಯಳನ್ನ ರಣಹದ್ದುಗಳಂತೆ ತಿಂದು ಕೊಂದು ಹಾಕಿದ್ದ ಕ್ರೂರಮೃಗಗಳಿಗೆ ಶಿಕ್ಷೆ ಕೊಡಿಸಲು ಪಣ ತೊಟ್ಟಿದ್ದ ಸೌಜನ್ಯ ಹೋರಾಟ ಸಮಿತಿ ನೋಟಾ ಅಭಿಯಾನಕ್ಕೆ ಕರೆ ನೀಡಿತ್ತು. ದಶಕದಿಂದಲೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಮೆರವಣಿಗೆಗಳ ಮೂಲಕವೇ ನೋಟಾಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಇದೇ ಈಗ ಅಭ್ಯರ್ಥಿಗಳ ನಿದ್ದೆಗೆಡಿಸಿದೆ.

ಸದ್ದು ಮಾಡಿದ ನೋಟಾ!  

ವಿದ್ಯಾರ್ಥಿನಿ ಸೌಜನ್ಯ ಮೇಲಿನ ದೌರ್ಜನ್ಯ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸಲು ಕಾಂಗ್ರೆಸ್ ಮತ್ತು ಬಿಜೆಪಿ ವಿಫಲವಾಗಿದೆ. ಚುನಾವಣೆಯಲ್ಲಿ ನೋಟಾಗೆ ಮತ ಹಾಕುವ ಮೂಲಕ ಇವ್ರಿಗೆ ಬುದ್ಧಿ ಕಲಿಸಬೇಕು ಎಂದು   ಮಹೇಶ ಶೆಟ್ಟಿ ತಿಮರೋಡಿ ಮತ್ತು ತಂಡ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕದೇ ನೋಟಕ್ಕಾಗಿ ಅಭಿಯಾನ ನಡೆಸಿದ್ದು, ಎರಡೂ ಪಕ್ಷಗಳಿಗೆ ನಿದ್ದೆಗೆಡಿಸಿದೆ. ಒಂದು ವೇಳೆ ನೋಟಾ ಅತಿ ಹೆಚ್ಚು ಚಲಾವಣೆ ಆದರೆ ಅದು ಬಿಜೆಪಿಯ ಮುನ್ನಡೆಯನ್ನು ಕಡಿಮೆ ಮಾಡಬಹುದು ಎನ್ನುವ ಲೆಕ್ಕಾಚಾರ ಇದೆ. 2 ಲಕ್ಷಕ್ಕೂ ಹೆಚ್ಚು ಜನರು ನೋಟಾ ಆಯ್ಕೆ ಮಾಡಬಹುದು ಮತ್ತು ಅದು ಬಿಜೆಪಿ ಮತಗಳಿಗೆ ಕತ್ತರಿ ಹಾಕುವ ಸಾಧ್ಯತೆಯಿದೆ. ಅದರಲ್ಲೂ ಬಿಜೆಪಿ ಬೆಂಬಲಿಗರೇ ಅತೀ ಹೆಚ್ಚು ಈ ಬಾರಿ ನೋಟಾಗೆ ಮತ ಹಾಕಿದ್ದಾರೆಯೇ ಎಂಬುದು ಜಿಲ್ಲಾ ಬಿಜೆಪಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರವು ಮತದಾನದ ಪ್ರಮಾಣದಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಸ್ವಾತಂತ್ರ್ಯ ಬಂದ ಬಳಿಕ ನಡೆದಿರುವ 17 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಒಂಬತ್ತು ಸಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಎಂಟು ಸಲ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು, 1991ರ ಚುನಾವಣೆ ಬಳಿಕ ಇಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗೆಲ್ಲುತ್ತಾ ಬಂದಿದ್ದಾರೆ. 2019ರ ಚುನಾವಣೆ ವೇಳೆಗೆ ಗೆಲುವಿನ ಅಂತರವನ್ನು ಬಿಜೆಪಿ 2.75 ಲಕ್ಷ ಮತಗಳವರೆಗೆ ಹೆಚ್ಚಿಸಿಕೊಂಡಿತ್ತು. ಆದ್ರೆ ಈ ಬಾರಿ ಎರಡೂ ಪಕ್ಷದ ಅಭ್ಯರ್ಥಿಗಳು ಅಷ್ಟೇನು ಪ್ರಚಾರದಲ್ಲಿ ತೊಡಗಿರಲಿಲ್ಲ.

ಅಬ್ಬರದ ಪ್ರಚಾರವಿಲ್ಲ! 

ಇನ್ನು ಈ ಬಾರಿ ಬಿಜೆಪಿ ಅಭ್ಯರ್ಥಿ ಪರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ ಭಾಟಿಯಾ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷವು ಚುನಾವಣೆ ಘೋಷಣೆಯಾಗುವ ಮುನ್ನವೇ ಅಡ್ಯಾರ್‌ನಲ್ಲಿ ಪಕ್ಷದ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿತ್ತು. ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ ಆದಿಯಾಗಿ ಪ್ರಮುಖರು ಭಾಗವಹಿಸಿದ್ದರು. ಆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರಂತಹ ನಾಯಕರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಸಲ ಬಹಿರಂಗ ಪ್ರಚಾರದ ಅಬ್ಬರ ಕಡಿಮೆ ಇತ್ತು. ಎರಡೂ ಪಕ್ಷಗಳ ನಾಯಕರು ಸಣ್ಣ ಪುಟ್ಟ ಸಭೆಗಳನ್ನು ಆಯೋಜಿಸುವುದಕ್ಕೆ ಹಾಗೂ ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿದ್ದರು.

ಈ ಬಾರಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೋರಾಟಗಾರರು ಕಡೇ ಕ್ಷಣದವರೆಗೂ ಕಸರತ್ತು ನಡೆಸಿದ್ದಾರೆ.  ಬಿರುಸಿನ ಮತದಾನದ ನಡುವೆಯೂ ನೋಟಾ ಅಭಿಯಾನ ಕೂಡ ನಡೆದಿದೆ. ಸೌಜನ್ಯ ಪರ ಹೋರಾಟಗಾರರು ನೋಟಾಕ್ಕೆ ಮತ ಹಾಕಿ ಎಂದು ಬೂತ್ ಮಾಡಿಕೊಂಡಿದ್ದರು. ಒಟ್ನಲ್ಲಿ ಸೌಜನ್ಯ ಸಾವಿನ ನ್ಯಾಯದ ಕೂಗು ಈ ಬಾರಿ ದಕ್ಷಿಣ ಕನ್ನಡ ಚುನಾವಣೆಯ ದಿಕ್ಕನ್ನೇ ಬದಲಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಶುಕ್ರವಾರ ಮತದಾನ ನಡೆದಿದ್ದು, ಎಷ್ಟು ಮತದಾರರು ನೋಟಾ ಒತ್ತಿದ್ದಾರೆ ಅನ್ನೋದು ಫಲಿತಾಂಶದ ದಿನ ಹೊರಬೀಳಲಿದೆ.

Shwetha M

Leave a Reply

Your email address will not be published. Required fields are marked *