ಸೌಜನ್ಯನಂತೆ ಜೋಡಿ ಕೊಲೆಗೂ ಅನ್ಯಾಯ – ಸಂತೋಷ್ ರಾವ್ ನೇ ಆರೋಪಿಯಾಗಿದ್ದೇಗೆ?
2 ಕೇಸ್ ನಲ್ಲೂ ಅಸಲಿ ಹಂತಕರ ರಕ್ಷಣೆ?

ಸೌಜನ್ಯನಂತೆ ಜೋಡಿ ಕೊಲೆಗೂ ಅನ್ಯಾಯ – ಸಂತೋಷ್ ರಾವ್ ನೇ ಆರೋಪಿಯಾಗಿದ್ದೇಗೆ?2 ಕೇಸ್ ನಲ್ಲೂ ಅಸಲಿ ಹಂತಕರ ರಕ್ಷಣೆ?

ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣ ಫಲಿತಾಂಶದ ಬಳಿಕ ತಣ್ಣಗಾಗಿತ್ತು. ಆದ್ರೀಗ ಮತ್ತೊಮ್ಮೆ ಪ್ರಕರಣದ ತನಿಖೆಗೆ ಒತ್ತಾಯದ ಕೂಗು ಕೇಳಿ ಬರ್ತಿದೆ. ನ್ಯಾಯಕ್ಕಾಗಿ ಹೋರಾಟ ಸಮಿತಿ ಮತ್ತೆ ಧ್ವನಿ ಎತ್ತಿದೆ. ಅಷ್ಟೇ ಅಲ್ಲದೆ ಮತ್ತೊಂದು ಜೋಡಿ ಕೊಲೆ ವಿಚಾರ ಪ್ರಸ್ತಾಪಿಸಿ ನೈಜ ಆರೋಪಿಗಳನ್ನ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟ ಸಮಿತಿ ಆರೋಪ ಮಾಡಿದೆ. ಸೌಜನ್ಯ ಕೇಸ್ ಹಾಗೂ ಮಾವುತ ಕೊಲೆ ನಡೆದ ಸಮಯದಲ್ಲಿ ಎರಡೂ ಪ್ರಕರಣಗಳ ಪ್ರಭಾರಿ ತನಿಖಾಧಿಕಾರಿ, ಸಂತೋಷ್ ರಾವ್ ಅವರನ್ನೇ ಆರೋಪಿ ಮಾಡಿ ಭಿನ್ನ ವರದಿ ಸಲ್ಲಿಸಿರುವುದು ನ್ಯಾಯಾಲಯದ ದಾಖಲೆಗಳಿಂದ ಸಾಬೀತುಗೊಂಡಿದೆ ಎಂದಿದ್ದಾರೆ. ಅಷ್ಟಕ್ಕೂ ಏನಿದು ಹೊಸ ಬೇಡಿಕೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್-ಕೊಹ್ಲಿಗೆ ಕೊನೇ ವಿಶ್ವಕಪ್? – ವಿದಾಯಕ್ಕೆ ಸಜ್ಜಾದ IND ಸ್ಟಾರ್ಸ್? 

 ನೈಜ ಆರೋಪಿಗಳ ರಕ್ಷಣೆ!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 2012ರ ಅಕ್ಟೋಬರ್ 9ರಂದು ಸೌಜನ್ಯ ಎಂಬ ವಿದ್ಯಾರ್ಥಿನಿಯ ಕೊಲೆ ನಡೆದಿತ್ತು. ಅದೂ ಕೂಡ ಸಾಮೂಹಿಕ ದೌರ್ಜನ್ಯ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆದ್ರೆ ಸೌಜನ್ಯ ಕೊಲೆ ಪ್ರಕರಣಕ್ಕೆ 21 ದಿನಗಳ ಮುಂಚಿತವಾಗಿ ನಾರಾಯಣ ಮಾವುತ ಹಾಗೂ ಯಮುನಾ ಜೋಡಿ ಕೊಲೆ ಪ್ರಕರಣ ನಡೆದಿತ್ತು. ಈ ಪ್ರಕರಣದ ನೈಜ ಆರೋಪಿಗಳನ್ನು ಪೊಲೀಸ್ ಇಲಾಖೆ 11 ವರ್ಷವಾದರೂ ಪತ್ತೆ ಹಚ್ಚದೆ ಸಿ ವರದಿ ನೀಡಿ ಮೌನವಾಗಿದೆ. ಇದೀಗ ಸಿ ವರದಿ ಸಂಪೂರ್ಣ ದೃಢೀಕೃತ ದಾಖಲೆಯನ್ನು ಸಮಿತಿಯು ಪಡೆದಿದೆ. ಮಾವುತ ಕುಟುಂಬದ ಜೋಡಿ ಕೊಲೆ ಪ್ರಕರಣದಲ್ಲಿಯೂ ಸೌನ್ಯ ಪ್ರಕರಣದಲ್ಲಿ ಪ್ರಸ್ತುತ ನಿರ್ದೋಷಿಯಾಗಿ ನ್ಯಾಯಾಲಯದಿಂದ ಬಿಡುಗಡೆಯಾಗಿರುವ ಸಂತೋಷ್ ರಾವ್​ರನ್ನೇ ಆರೋಪಿ ಮಾಡಲಾಗಿದೆ. ಆ ಮೂಲಕ ಪ್ರರಕರಣದ ದಿಕ್ಕು ತಪ್ಪಿಸಿ ನೈಜ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಸಿ ವರದಿಯ ಅಧ್ಯಯನದಿಂದ ಬಹಿರಂಗಗೊಂಡಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ. ಸಿ ವರದಿಯ ಪ್ರಕಾರ ಸಂತೋಷ್ ರಾವ್ ನನ್ನು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ 2012ರ ಅಕ್ಟೋಬರ್ 18ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಂಚರ ಸಮಕ್ಷಮ ರಕ್ತದ ಮಾದರಿ ಪಡೆಯಲಾಗಿದೆ. ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಮಾವುತ ಜೋಡಿ ಕೊಲೆ ನಡೆದ 2012ರ ಸೆಪ್ಟೆಂಬರ್ 20ರ ರಾತ್ರಿ ಸಂತೋಷ್ ರಾವ್ ಧರ್ಮಸ್ಥಳದಲ್ಲಿಯೇ ಇದ್ದ ಬಗ್ಗೆ ವರದಿ ನೀಡಿದ್ದರೆ, ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಘಟನೆಯ ದಿನ ಅಂದರೆ ಅಕ್ಟೋಬರ್ 9ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಬಂದಿರುವುದಾಗಿ ಹೇಳಲಾಗಿದೆ. ಮಾವುತ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನನ್ನು ದಸ್ತಗಿರಿ ಮಾಡಿದಾಗ ಆತನಿಂದ ರಕ್ತದ ಕಲೆ ಇರುವ ಬಟ್ಟೆಗಳನ್ನು ವಶಪಡಿಸಲಾಗಿತ್ತು. ಸೌಜನ್ಯ ಪ್ರಕರಣದಲ್ಲಿ ರಕ್ತದ ಕಲೆ ಇರುವ ಬಟ್ಟೆಯ ಉಲ್ಲೇಖವಿಲ್ಲ ಮಾವುತ ಕೊಲೆ ಪ್ರಕರಣದಲ್ಲಿ ರಾಜೇಂದ್ರ ರೈ ಎಂಬ ವ್ಯಕ್ತಿಯಿಂದ ದೂರು ಪಡೆದು ಎಫ್‌ಐಆ‌ರ್ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿ ಪ್ರಭಾರಿ ತನಿಖಾಧಿಕಾರಿ, ಸಂತೋಷ್ ರಾವ್ ಧರ್ಮಸ್ಥಳದಲ್ಲೇ ಇದ್ದ ಬಗ್ಗೆ ಭಿನ್ನ ವರದಿ ನೀಡಿದ್ದಾರೆ. ನೈಜ ಆರೋಪಿಗಳ ಮಾದರಿ ರಕ್ತ ಪರಿಶೀಲನೆ ಮಾಡದೆ ಕೇವಲ ಸಂತೋಷ್ ರಾವ್ ನನ್ನು ಆರೋಪಿಯನ್ನಾಗಿ ಮಾಡಿರುವುದು ನೈಜ ಆರೋಪಿಗಳ ರಕ್ಷಣೆ ಎನ್ನುವುದು ಸಿ ವರದಿಯಿಂದ ದೃಢವಾಗುತ್ತದೆ ಎಂದು ಆರೋಪಿಸಿದ್ದಾರೆ.

ಸೋ ಈ ಎಲ್ಲಾ ಅಂಶಗಳನ್ನ ನೋಡಿದ್ರೆ ಜಿಲ್ಲಾ ಪೊಲೀಸ್, ರಾಜ್ಯ ಸರಕಾರದ ಸಿಐಡಿ ತನಿಖೆ ಮತ್ತು ಕೇಂದ್ರ ಸರಕಾರದ ಸಿಬಿಐ ತನಿಖೆಯ ಬಗ್ಗೆ ಅನುಮಾನವಿದೆ. ಸಿಐಡಿ ತನಿಖೆಯ ಕನ್ನಡ ವರದಿಯನ್ನು ಇಂಗ್ಲಿಷ್ ಗೆ ಅನುವಾದಿಸುವ ಕೆಲಸವನ್ನು ಮಾತ್ರವೇ ಸಿಬಿಐ ತನಿಖೆಯಲ್ಲಿ ಮಾಡಲಾಗಿದೆ ಎಂದು ಆರೋಪಿಸಿರುವ ಹೋರಾಟ ಸಮಿತಿ ಸದಸ್ಯರು, ನೈಜ ಆರೋಪಿಗಳ ತನಿಖೆ ನೆಡೆಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ ಸೌಜನ್ಯ ಕೊಲೆ ಪ್ರಕರಣದ ಜೊತೆ ಮಾವುತ ಜೋಡಿ ಕೊಲೆ ಕೇಸ್ ಕೂಡ ಮತ್ತೊಮ್ಮೆ ಸದ್ದು ಮಾಡ್ತಿದೆ. ಮತ್ತೊಮ್ಮೆ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *