ಮಂಗಳೂರಿಗೆ ಚೌಟ.. ಉಡುಪಿಗೆ ಕೋಟ – ಸೌಜನ್ಯಗಾಗಿ ಬಿದ್ದ NOTA ಮತಗಳೆಷ್ಟು?
ಈ ಸಲವೂ ಸಾವಿಗೆ ನ್ಯಾಯ ಸಿಗಲಿಲ್ವಾ?
ಸೌಜನ್ಯ ಸಾವಿನ ನ್ಯಾಯಕ್ಕಾಗಿ ನೋಟಾ ಅಭಿಯಾನದ ಕಾರಣಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡಿತ್ತು. ನಿಮ್ಮ ಮತಗಳನ್ನ ನೋಟಾಗೆ ಹಾಕೋ ಮೂಲಕ ಸೌಜನ್ಯ ಸಾವಿಗೆ ನ್ಯಾಯ ಕೊಡಿಸಿ ಎಂಬ ಅಭಿಯಾನ ನಡೆಸಿತ್ತು. ಆದ್ರೆ ಕೊನೆಗೂ ಬಿಜೆಪಿ ಮತ್ತೊಮ್ಮೆ ಗೆಲುವಿನ ಪತಾಕೆ ಹಾರಿಸಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಜೇಶ್ ಚೌಟ ಜಯಬೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಸೋಲು ಕಂಡಿದ್ದಾರೆ.
ಇದನ್ನೂ ಓದಿ: ಮಂಡ್ಯದ ಗಂಡು ಕುಮಾರಣ್ಣ – ಮಗನ ಸೋಲಿಗೆ ಅಪ್ಪನ ಪ್ರತೀಕಾರ -ಸುಮಕ್ಕನ ದಾಖಲೆ ಮುರಿದ HDK
ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಳೆದ ಮೂರು ದಶಕಗಳಿಂದ ಬಿಜೆಪಿ ಕೋಟೆಯಾಗಿ ಬದಲಾಗಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿ ಅನಾಯಾಸವಾಗಿ ಗೆದ್ದಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ 1991ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸೋಲನುಭವಿಸಿದ ಬಳಿಕ ಕಾಂಗ್ರೆಸ್ ಸತತ ಸೋಲು ಕಂಡಿದೆ. ಜನಾರ್ದನ ಪೂಜಾರಿ ಬಳಿಕ ವೀರಪ್ಪ ಮೊಯ್ಲಿ, ಮಿಥುನ್ ರೈ ಅವರನ್ನು ಅಭ್ಯರ್ಥಿ ಮಾಡಿದರೂ ಕಾಂಗ್ರೆಸ್ಗೆ ಜಯ ಸಾಧ್ಯವಾಗಿರಲಿಲ್ಲ. ಧನಂಜಯಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಇಲ್ಲಿ ಸತತವಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಧನಂಜಯಕುಮಾರ್ ಅವರಿಂದ ಆರಂಭವಾದ ಬಿಜೆಪಿಯ ವಿಜಯ ಯಾತ್ರೆಯಲ್ಲಿ ಪ್ರತಿ ಚುನಾವಣೆಯಲ್ಲಿ ಗೆಲುವಿನ ಅಂತರ ಹೆಚ್ಚಾಗುತ್ತಲೇ ಹೋಗಿದೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ನಳಿನ್ ಕುಮಾರ್ ಕಟೀಲ್ 2.75 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗಮನ ಸೆಳೆದಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ನಲ್ಲಿ ಜನಾರ್ದನ ಪೂಜಾರಿ ಶಿಷ್ಯ ಪದ್ಮರಾಜ್ ಪೂಜಾರಿಗೆ ಟಿಕೆಟ್ ನೀಡಲಾಗಿತ್ತು. ಇವರಿಬ್ಬರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪ್ರಮುಖ ಪಕ್ಷದ ಅಭ್ಯರ್ಥಿಗಳಾದರೂ ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅಚ್ಚರಿಯೆಂದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿದ್ದು, ನೋಟ ಮೂರನೇ ಸ್ಥಾನದಲ್ಲಿದೆ. ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ದೊಡ್ಡ ಮಟ್ಟದ ನೋಟ ಮತದಾನವಾಗಿದೆ.
ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಗೆಲುವಿನ ಕೇಕೆ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ಜಯಬೇರಿ ಬಾರಿಸಿದೆ. ಈ ಬಾರಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿದಿದ್ರು. ಇಬ್ಬರು ಆಯಾ ಪಕ್ಷಗಳ ಹಿರಿಯ ಮುಖಂಡರೇ ಆಗಿದ್ದು, ರಾಜ್ಯ ರಾಜಕಾರಣದಿಂದ ದೇಶ ರಾಜಕಾರಣಕ್ಕೆ ತೆರಳಲು ಅಖಾಡಕ್ಕೆ ಇಳಿದಿದ್ರು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಗೋ ಬ್ಯಾಕ್ ಎಂದ ಚಿಕ್ಕಮಗಳೂರು ಜನ ಈ ಬಾರಿ ಜಯಪ್ರಕಾಶ್ ಅವರ ಕೈಹಿಡಿಯುತ್ತಾರೋ ಅಥವಾ ಕರಾವಳಿಗರ ಬೆಂಬಲದಿಂದ ಪೂಜಾರಿ ಗೆಲ್ಲುತ್ತಾರೋ ಕುತೂಹಲ ಮೂಡಿಸಿತ್ತು. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದ್ರೆ ಅಂತಿಮವಾಗಿ ಉಡುಪಿ ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ಕಮಲ ಅರಳಿದೆ.