ನೇಹಾ ಹತ್ಯೆ ಹಿಂದೆ ಹಲವರ ಕೈವಾಡ.. – ಸ್ಫೋಟಕ ಸತ್ಯ ಹೊರ ಹಾಕಿದ್ಯಾರು?

ನೇಹಾ ಹತ್ಯೆ ಹಿಂದೆ ಹಲವರ ಕೈವಾಡ.. – ಸ್ಫೋಟಕ ಸತ್ಯ ಹೊರ ಹಾಕಿದ್ಯಾರು?

ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹೀರೇಮಠ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆಡಳಿತ ಮತ್ತು ವಿಪಕ್ಷ ನಾಯಕರ ನಡುವಿನ ವಾಗ್ಯುದ್ಧದ ಬಿಸಿ ನಡುವೆ ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ವ್ಯಾಪಿಸಿದೆ. ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸೋಮವಾರ ರಾಜ್ಯಾದ್ಯಂತ  ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಂತೂ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಿದ್ರಾಮುಲ್ಲಾಖಾನ್, ಡಿಕೆ ಬ್ರದರ್ಸ್​ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ನೇಹಾ ಹತ್ಯೆ ಪ್ರಕರಣವನ್ನ ಸಿಐಡಿಗೆ ವಹಿಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ಕೋರ್ಟ್ ಗೆ ಕೇಸ್ ಹಸ್ತಾಂತರ ಮಾಡೋದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ಗೆ ಹೀನಾಯ ಸೋಲು – ರಾಜಸ್ಥಾನಕ್ಕೆ ಭರ್ಜರಿ ಜಯ

ನೇಹಾ ಪ್ರಕರಣ ಸಿಐಡಿಗೆ!     

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಘಟನೆ ಸಂಬಂಧ ಆದಷ್ಟು ಬೇಗ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಪ್ರಕರಣದ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪಿಸಲಾಗುತ್ತದೆ. ಪ್ರಕರಣವನ್ನು ಆದಷ್ಟು ಬೇಗ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೇಹಾ ಅವರ ತಂದೆ ನಾಲ್ಕು ಜನರ ಹೆಸರು ಹೇಳಿದ್ದಾರೆ. ಆ ಆ್ಯಂಗಲ್​​ನಲ್ಲೂ ಕೂಡ ತನಿಖೆ ಮಾಡ್ತೀವಿ. ತ್ವರಿತ ಕೋರ್ಟ್ ತೆರಯಲು ಮನವಿ ಮಾಡಿ ಬೇಗ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋದಾಗಿ  ಹೇಳಿದ್ದಾರೆ. ಪ್ರಕರಣ ಸಂಬಂಧ ಮಾತನಾಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ ಸಿಐಡಿಯಿಂದ ತನಿಖೆ ಮಾಡಿಸಲಾಗುತ್ತದೆ. ಕೊಲೆ ಮಾಡಿದ ವ್ಯಕ್ತಿಯ ಬಂಧನ ಒಂದು ಗಂಟೆಯಲ್ಲಿ ಆಗಿದೆ. ಕಾನೂನಿನ ಅಡಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಸದ್ಯ ಲೋಕಸಭಾ ಚುನಾವಣೆ ಇರೋದ್ರಿಂದ ನೇಹಾ ಪ್ರಕರಣವನ್ನ ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಐಡಿಗೆ ವಹಿಸಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ನೇಹಾ ಪ್ರಕರಣವನ್ನು ಮುಂದಿಟ್ಟಿಕೊಂಡು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಆ ಮೂಲಕ ಕಾಂಗ್ರೆಸ್ ವಿರುದ್ಧ ಅಸ್ತ್ರವನ್ನಾಗಿ ಪ್ರಯೋಗ ಮಾಡಿದೆ.  ಅಲ್ದೇ ಪ್ರಕರಣ ಖಂಡಿಸಿ ಮಂಗಳವಾರವೂ ರಾಜ್ಯಾದ್ಯಂತ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ ಕರೆ ಕೊಟ್ಟಿದ್ದಾರೆ. ಈ ಹೇಯ, ಅನಾಗರಿಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಪಕ್ರರಣವನ್ನು ಖಂಡಿಸಿ ಏಪ್ರಿಲ್ 23ರ ಸಂಜೆ 6 ಗಂಟೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಮೊಂಬತ್ತಿ ಹಚ್ಚಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದಿದ್ದಾರೆ. ಇವತ್ತೂ ಕೂಡ ರಾಜ್ಯದ ಹಲವೆಡೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗಿದೆ.

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನ ಬಂದ್​ ಮಾಡಿದರು. ಅಂಗಡಿ ಬಂದ್​ ಮಾಡುವ ಮೂಲಕ ಮುಸ್ಲಿಂ ವ್ಯಾಪಾರಿಗಳು ಬಂದ್​ಗೆ ಬೆಂಬಲ ನೀಡಿದರು. ಹಂತಕ ಫಯಾಜ್​ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಮೈಸೂರಿನಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ಕಿಚ್ಚು ಜೋರಾಗಿತ್ತು. ಗಾಂಧಿವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ರು. ತುಮಕೂರಿನ ಬಿಜಿಎಸ್ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇಷ್ಟೇ ಅಲ್ಲದೆ ಹಾವೇರಿ, ಬಳ್ಳಾರಿ, ಬಾಗಲಕೋಟೆ, ಕಲಬುರಗಿಯಲ್ಲೂ ಬಿಜೆಪಿ ನಾಯಕರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಯಿತು.

ನೇಹಾ ಹತ್ಯೆ ಸಂಬಂಧ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಇದು ವೈಯಕ್ತಿಕ ವಿಚಾರವಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನೇಹಾಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ನೇಹಾ ತಂದೆ ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಫಯಾಜ್ ಮಾತ್ರವಲ್ಲದೇ ಆತನಿಗೆ ಸಹಾಯ ಮಾಡಿದ್ದ ಒಟ್ಟು ಎಂಟು ಮಂದಿಯ ಬಗ್ಗೆ ಪೊಲೀಸರಿಗೆ ಬಹಿರಂಗವಾಗಿ ಮಾಹಿತಿ ನೀಡಿದ್ದೇನೆ. ಆದರೆ ಇದುವರೆಗೂ ಆರೋಪಿಯನ್ನು ಬಂಧಿಸಿದ್ದು ಬಿಟ್ಟರೆ ಪೊಲೀಸರು ಬೇರೆ ಏನು ಕೆಲಸ ಮಾಡಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ಇಲ್ಲವೇ ನಾನೇ ಕಾನೂನು ಕೈಗೆತ್ತಿಕೊಂಡು ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕಾಗುತ್ತದೆ. ನನ್ನ ಮಗಳ ಮತಾಂತರಕ್ಕೆ ಯತ್ನ ನಡೆದಿತ್ತು, ಆಕೆ ನಮ್ಮ ಶರಣರ ಪದ್ಧತಿಯನ್ನು ಪಾಲನೆ ಮಾಡುತ್ತಿದ್ದಳು. ಇಸ್ಲಾಂಗೆ ಮತಾಂತರ ಆಗಲು ನಿರಾಕರಿಸಿದ್ದರಿಂದ ಫಯಾಜ್ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಒಟ್ನಲ್ಲಿ ಎಲೆಕ್ಷನ್ ಟೈಮಲ್ಲಿ ನೇಹಾ ಹತ್ಯೆ ಪ್ರಕರಣ ರಾಜಕೀಯ ನಾಯಕರಿಗೆ ಅಸ್ತ್ರವಾಗಿದ್ದು ಕೆಸರೆರಚಾಟ ಜೋರಾಗಿ ನಡೀತಿದೆ. ಆದ್ರೆ ನೇಹಾಳ ಸಾವನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೆ ನ್ಯಾಯ ಕೊಡಿಸಬೇಕಾದ ಜಬಾಬ್ದಾರಿ ಇದೆ. ಫಯಾಜ್​ನಂತಹ ರಾಕ್ಷಸರಿಗೆ ತಕ್ಕ ಶಿಕ್ಷೆಯಾಗಬೇಕಿದೆ.

 

Shwetha M

Leave a Reply

Your email address will not be published. Required fields are marked *