ಶೂಟೌಟ್‌ನಲ್ಲಿ ಪತ್ರಕರ್ತನ ದಾರುಣ ಅಂತ್ಯ – ದುಷ್ಕರ್ಮಿಯ ಅಟ್ಟಹಾಸಕ್ಕೆ ಬಾಲಕಿಯೂ ಬಲಿ
ಫ್ಲೋರಿಡಾದ ಒರ್ಲ್ಯಾಂಡೋದಲ್ಲಿ ನಡೆದ ಶೂಟೌಟ್‌ನಲ್ಲಿ ಓರ್ವ ಪತ್ರಕರ್ತ ಹಾಗೂ 9 ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಬಂದೂಕುಧಾರಿಯೊಬ್ಬ, ಮಾಧ್ಯಮದ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ, ಇಬ್ಬರು ಪತ್ರಕರ್ತರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ 9 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ್ದಾನೆ. ದುಷ್ಕರ್ಮಿಯ ಅಟ್ಟಹಾಸಕ್ಕೆ ಒಬ್ಬ ಪತ್ರಕರ್ತ ಮತ್ತು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ವರದಿಗಾರ ಮತ್ತು ಬಾಲಕಿಯ ತಾಯಿಗೂ ಗಂಭೀರ ಗಾಯಗಳಾಗಿವೆ. 19 ವರ್ಷದ ಆರೋಪಿ ಕೀತ್ ಮೆಲ್ವಿನ್ ಮೋಸೆಸ್ನನ್ನು ಬಂಧಿಸಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್ನ ಅಧಿಕಾರಿ ಜಾನ್ ಮಿನಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಂಆರ್ ಐ ಸ್ಕ್ಯಾನ್ ವೇಳೆ ಗುಂಡೇಟು.. ವಕೀಲ ಸಾವು – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣನಾ..!?
ಬಂಧಿತ ಆರೋಪಿ ಹಾಗೂ ಪತ್ರಕರ್ತರು ಮತ್ತು ಬಲಿಯಾದ ಬಾಲಕಿಗೂ ಯಾವುದೇ ಸಂಬಂಧವಿಲ್ಲ, ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನುವ ಕುರಿತು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಗುಂಡಿನ ದಾಳಿ ಬಗ್ಗೆ ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.