ತೀವ್ರ ಹೃದಯಾಘಾತ – ಚಿಕಿತ್ಸೆ ಫಲಿಸದೆ ಪತ್ರಕರ್ತ ಶ್ರೇಯಸ್ ಆರ್ ನಿಧನ

ತೀವ್ರ ಹೃದಯಾಘಾತ – ಚಿಕಿತ್ಸೆ ಫಲಿಸದೆ ಪತ್ರಕರ್ತ ಶ್ರೇಯಸ್ ಆರ್ ನಿಧನ

ಪತ್ರಕರ್ತ ಶ್ರೇಯಸ್ ಆರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಹಾಗೂ 9 ವರ್ಷದ ಮಗನನ್ನು ಶ್ರೇಯಸ್ ಅಗಲಿದ್ದಾರೆ. ನೆಟ್​ವರ್ಕ್​ 18ನ ಕನ್ನಡ ಡಿಜಿಟಲ್ (News18 Kannada) ವಿಭಾಗದ ಮುಖ್ಯಸ್ಥ ಶ್ರೇಯಸ್ ಆರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಹೃದಯಾಘಾತವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ರೇಯಸ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶ್ರೇಯಸ್ ಅವರಿಗೆ 41 ವರ್ಷ ವಯಸ್ಸಾಗಿತ್ತು.

ಶ್ರೇಯಸ್ ಆರ್ ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನೀಡಲಾಗುವ ಫೆಲೋಶಿಪ್ ಯೋಜನೆಗೆ ಆಯ್ಕೆಯಾಗಿದ್ದರು. ಇದರ ನಡುವೆ ಶ್ರೇಯಸ್ ಆರ್ ಅವರ ತಂದೆ ರಘುರಾಂ ಅವರು ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಇದೇ ವರ್ಷ ಜುಲೈ 14ರಂದು ನಿಧನರಾಗಿದ್ದರು. ಶ್ರೇಯಸ್ ಅವರು ಕನ್ನಡದ ದಿವಂಗತ ನಟ ನವೀನ್ ಮಯೂರ್ ಅವರ ಸಹೋದರ ಆಗಿದ್ದಾರೆ. 2010ರಲ್ಲಿ ‘ಸ್ಪರ್ಶ’ ಖ್ಯಾತಿಯ ನವೀನ್ ಮಯೂರ್ ಅವರು ನಿಧನರಾಗಿದ್ದರು. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

‘ಸ್ಪರ್ಶ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಯೂರ್ ಅವರನ್ನು ಆಗ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಸ್ ಅವರು, ಚಿಕಿತ್ಸೆಗಾಗಿ ಅಮೆರಿಕಗೆ ಆಗಮಿಸುವಂತೆ ಹೇಳಿದ್ದರು. ಅಲ್ಲದೆ, ಸಹೋದರನಿಗೆ ಟಿಕೆಟ್ ಕೂಡ ಬುಕ್ ಮಾಡಿದ್ದರು. ಚಿಕಿತ್ಸೆಗಾಗಿ ಇನ್ನೇನು ಅಮೆರಿಕಗೆ ತೆರಳಬೇಕು ಎಂಬ ಸಂದರ್ಭದಲ್ಲಿಯೇ ಮಯೂರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಸಹೋದರನ ನಿಧನ ಬಳಿಕ ಕುಟುಂಬ ಜವಾಬ್ದಾರಿ ಪಡೆದುಕೊಂಡಿದ್ದ ಶ್ರೇಯಸ್ ಅವರು ಭಾರತಕ್ಕೆ ವಾಪಸ್ ಆಗಿ, ಇಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದ್ದರು. ಕಳೆದ ಎರಡು ದಿನಗಳಿಂದ ರಕ್ತವಾಂತಿ ಮಾಡಿಕೊಂಡಿದ್ದ ಶ್ರೇಯಸ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ತೀವ್ರ ಹೃದಯಾಘಾರದಿಂದ ಶ್ರೇಯಸ್ ಕೊನೆಯುಸಿರೆಳೆದರು.

Sulekha