ಸಂಪೂರ್ಣ ಮುಳುಗಡೆಯಾಗುತ್ತಾ ಜೋಶಿಮಠ? – ಭೂಕುಸಿತದ ಪ್ರಾಥಮಿಕ ವರದಿ ಬಿಡುಗಡೆ

ಸಂಪೂರ್ಣ ಮುಳುಗಡೆಯಾಗುತ್ತಾ ಜೋಶಿಮಠ? – ಭೂಕುಸಿತದ ಪ್ರಾಥಮಿಕ ವರದಿ ಬಿಡುಗಡೆ

ಡೆಹ್ರಾಡೂನ್: ಜೋಶಿಮಠದ ಭೂಕುಸಿತದ ಪ್ರಾಥಮಿಕ ವರದಿಯೊಂದನ್ನು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ(ಎನ್‌ಆರ್‌ಎಸ್‌ಸಿ) ಬಿಡುಗಡೆ ಮಾಡಿದೆ. ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗಡೆಯಾಗುವ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದೆ.

ಮುಳುಗುತ್ತಿರುವ ಪ್ರದೇಶಗಳ ಚಿತ್ರಗಳನ್ನು ಇಸ್ರೋ ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದ್ದು, ಈ ಚಿತ್ರದಲ್ಲಿ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಪಶ್ಚಿಮ ಮತ್ತು ಪೂರ್ವ ಘಟ್ಟಗಳಿಗೂ ಕಾದಿದ್ಯಾ ಆಪತ್ತು! – ಭೂವಿಜ್ಞಾನಿಗಳು ಹೇಳಿದ್ದೇನು?

ಇಸ್ರೋದ ಪ್ರಾಥಮಿಕ ವರದಿಯ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಕುಸಿತವಾಗಲು ಆರಂಭಗೊಂಡಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿತ್ತು. ಆದರೆ 2022ರ ಡಿಸೆಂಬರ್ 27 ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ. ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂಬ ಆತಂಕಕಾರಿ ವಿಚಾರ ವರದಿಯಿಂದ ಬಹಿರಂಗವಾಗಿದೆ.

ಜೋಶಿಮಠದಲ್ಲಿನ ರಸ್ತೆ, ಮನೆಗಳು ಸೇರಿದಂತೆ ಅನೇಕ ಕಡೆ ಬಿರುಕುಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿ ವಾಸಿಸಲು ಅಪಾಯಕಾರಿ ಎಂದು ಗುರುತಿಸಲಾಗಿರುವ 600ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮಂಗಳವಾರ ಮುಂದಾಗಿತ್ತು. ಉತ್ತರಾಖಂಡ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಜೋಶಿಮಠವನ್ನು ಈಗಾಗಲೇ ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ. ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸರ್ಕಾರ ಪರಿಹಾರವನ್ನು ಘೋಷಿಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

suddiyaana