ಕನ್ನಡಕ್ಕಾಗಿ ದುಡಿದ ಜಾನ್ ಫೇಥ್‌ಫುಲ್ ಫ್ಲೀಟ್ – ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದ ಬ್ರಿಟಿಷ್ ಅಧಿಕಾರಿ

ಕನ್ನಡಕ್ಕಾಗಿ ದುಡಿದ ಜಾನ್ ಫೇಥ್‌ಫುಲ್ ಫ್ಲೀಟ್ – ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದ ಬ್ರಿಟಿಷ್ ಅಧಿಕಾರಿ

ಕರುನಾಡಿನ ಇತಿಹಾಸ ಸಂಶೋಧನೆಯ ರಂಗದಲ್ಲಿ ಲೂಯಿ ರೈಸ್ ಮತ್ತು ಜಾನ್ ಫೇಥ್‌ಫುಲ್ ಫ್ಲೀಟ್ ಅಶ್ವಿನಿ ದೇವತೆಗಳಿದ್ದಂತೆ ಎಂದು ಹೇಳುತ್ತಾರೆ. ಹಾಗಿದ್ದರೆ ಈ ಜಾನ್ ಫೇಥ್‌ಫುಲ್ ಫ್ಲೀಟ್ ಕನ್ನಡಕ್ಕೆ ನೀಡಿದ ಕೊಡುಗೆ ಏನು ಎಂಬುದರ ವಿವರ ಇಲ್ಲಿದೆ.

ಇದನ್ನೂ ಓದಿ: ಕರುನಾಡು ಎಂದೆಂದಿಗೂ ಮರೆಯದ ಮಹಾಪುರುಷ -ರಾ.ಹಾ ದೇಶಪಾಂಡೆ ಬಗ್ಗೆ ನಿಮಗೆಷ್ಟು ಗೊತ್ತು?

ಇಂಗ್ಲೆಂಡಿನಲ್ಲಿ, ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಮಾಡಿ ಭಾರತಕ್ಕೆ ಬಂದಾಗ ಫ್ಲೀಟ್‌ಗೆ ಇಪ್ಪತ್ತರ ಹರೆಯ. ಅಂದಿನ ಬಾಂಬೆ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದ ಜೆಎಫ್‌ ಫ್ಲೀಟ್‌ಭಾರತಕ್ಕೆ ಬರುವ ಮೊದಲೇ ಸಂಸ್ಕೃತ ಅಭ್ಯಾಸ ಮಾಡಿದ್ದರು. ಇದು ಭಾರತದ ಭಾಷೆಗಳ ಮೇಲೆ ಫ್ಲೀಟ್‌ಗಿದ್ದ ಆಸಕ್ತಿಯನ್ನು ತೋರಿಸುತ್ತದೆ.. ನಂತರ ಮುಂಬಯಿಯಲ್ಲಿದ್ದಾಗ ಬಿಡುವಿನ ವೇಳೆಯಲ್ಲಿ ಸರ್ಕಾರದ ಶಾಸನ ಸಂಗ್ರಹಾಲಯದಲ್ಲಿ ಧೂಳು ತಿನ್ನುತ್ತ ಬಿದ್ದಿದ್ದ ಶಾಸನಗಳನ್ನು ಓದುವುದರಲ್ಲಿ ಆಸಕ್ತರಾದ ಫ್ಲೀಟ್‌ ಗಮನಕ್ಕೆ ಆಗಲೇ ಕನ್ನಡದ ಶಾಸನಗಳು ಬಂದಿದ್ದವು. ಅಲ್ಲಿಂದ ನಂತರ ಬೆಳಗಾವಿಗೆ ವರ್ಗಾವಣೆಯಾಗಿ1872ರಲ್ಲಿ ಬಾಂಬೆ ಸರ್ಕಾರದ ದಕ್ಷಿಣ ಭಾಗದ ವಿದ್ಯಾಧಿಕಾರಿಯಾಗಿ ಬಂದಿದ್ದು ಕನ್ನಡ ಹಾಗೂ ಕರ್ನಾಟಕದ ದೃಷ್ಟಿಯಿಂದ ಬಹುದೊಡ್ಡ ಬೆಳವಣಿಗೆ. ಇಲ್ಲಿ ಸ್ಥಳೀಯ ವಿದ್ವಾಂಸರೊಂದಿಗೆ ಬೆರೆತು ಕನ್ನಡ ಕಲಿತ ಫ್ಲೀಟ್‌ ನಂತರ ಸಂಸ್ಕೃತ – ಕನ್ನಡ ಶಾಸನಗಳ ಬಗ್ಗೆ ಎರಡು ಲೇಖನಗಳನ್ನು ಬರೆದು ಮುಂಬಯಿಯ ರಾಯಲ್ ಏಶಿಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದರಲ್ಲಿ ಕದಂಬರ ಕಾಲದ ಮೇಲೆ ವಿಶೇಷ ಬೆಳಕು ಬಿದ್ದಿತು. ಕರ್ನಾಟಕದ ರಾಜಮನೆತನಗಳ ಇತಿಹಾಸದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಜೆಎಫ್‌ ಫ್ಲೀಟ್‌, ‘ಮುಂಬಯಿ ಪ್ರಾಂತದ ಕನ್ನಡ ರಾಜ್ಯಗಳು’ ಎನ್ನುವ ಪುಸ್ತಕ ಬರೆದಿದ್ದರು.. ಇದರ ಮೂಲಕ ಕರ್ನಾಟಕವೆಂಬುದು ಪ್ರತ್ಯೇಕ ಅಸ್ತಿತ್ವವುಳ್ಳ ನಾಡು. ‘ಸದರ್ನ ಮರಾಠ ಕಂಟ್ರಿ’ ಅಲ್ಲ ಎಂಬ ಸಮರ್ಥಯುತವಾದ ಪ್ರತಿಪಾದನೆ ಮಾಡಿದ್ದರು.. ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಿಸಿದ್ದ ಮರಾಠ ಪ್ರಭಾವದಿಂದ ಮಂಕಾಗಿದ್ದ ಕನ್ನಡಕ್ಕೆ ಹೊಸ ಬೆಳಕು ಚೆಲ್ಲಿ ಕನ್ನಡದ ಅಸ್ತಿತ್ವ ಗುರುತಿಸಿದ ಫ್ಲೀಟ್, ಕನ್ನಡ ಭಾಷೆ ಮತ್ತು ಕನ್ನಡದ ನೆಲವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಫ್ಲೀಟ್ ತನ್ನನ್ನು ಕನ್ನಡದ ಅಭಿಮಾನಿ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಆದರೆ ಸತ್ಯ ನಿಷ್ಠೆ, ಕ್ರಿಯಾಶೀಲತೆಯನ್ನು ಕನ್ನಡಕ್ಕೆ ಧಾರೆಯೆರೆದಿದ್ದರು. ತನ್ನ ಹೆಸರಿನಲ್ಲಿದ್ದ ಫೇಥ್‌ಪುಲ್ ಪದಕ್ಕೆ ತಕ್ಕಂತೆ ಕನ್ನಡದ ಪರವಾಗಿ ನಿರಂತರವಾಗಿ ನಿಂತು ಫೆತ್‌ಫುಲ್ ಫ್ಲೀಟ್‌ರಾಗಿ ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದರು.

Sulekha