ಬೈಕ್‌ ಸವಾರರ ಸುರಕ್ಷತೆಗೆ ಸ್ಮಾರ್ಟ್ ವೇರಬಲ್ ಏರ್‌ಬ್ಯಾಗ್ ಸಿಸ್ಟಮ್ – ತೆಲಂಗಾಣ ಯುವತಿ ಸಾಧನೆಗೆ ಕಾರಣವಾದ ಅಪ್ಪನ ಅಪಘಾತ

ಬೈಕ್‌ ಸವಾರರ ಸುರಕ್ಷತೆಗೆ ಸ್ಮಾರ್ಟ್ ವೇರಬಲ್ ಏರ್‌ಬ್ಯಾಗ್ ಸಿಸ್ಟಮ್ –  ತೆಲಂಗಾಣ ಯುವತಿ ಸಾಧನೆಗೆ ಕಾರಣವಾದ ಅಪ್ಪನ ಅಪಘಾತ

 ತಂದೆಯ ದುರಂತ ಸಾವು ಮಗಳ ಸಾಧನೆಗೆ ಕಾರಣವಾಗಿದೆ. ತೆಲಂಗಾಣದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಪರ್ಕರಿ ಶ್ರೀ ಚಂದನಾ ಎಂಬಾಕೆ ದ್ವಿಚಕ್ರ ವಾಹನ ಸವಾರರ ಜೀವ ಉಳಿಸುವ ಸಾಧನವನ್ನ ಕಂಡು ಹಿಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರದಿಂದ 12 ಲಕ್ಷ ರೂಪಾಯಿ ಅನುದಾನ ಸಿಕ್ಕಿದೆ.

ತೆಲಂಗಾಣದ ಕರೀಂಗನರ್​ನ ಪದ್ಮನಗರ್​ನ ನಿವಾಸಿಯಾಗಿರುವ ಚಂದನಾ​ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಅವರ ತಂದೆ ರವಿಂದರ್​ ರಾವ್​ ಡ್ರೈವರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ ಸ್ವಪ್ನ ಗೃಹಿಣಿಯಾಗಿದ್ದು, ಇವರ ಅಕ್ಕ ಅರ್ಚನಾ ಐಐಐಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಂದನ​ ಜ್ಯೋತಿಶ್ಮತಿ ಸ್ವಾಯುತ್ತ ಇಂಜಿನಿಯರಿಂಗ್​ ಕಾಲೇಜ್​ನಲ್ಲಿ ಎಲೆಕ್ಟ್ರಾನಿಕ್ಸ್​ ಮತ್ತು ಕಮ್ಯೂನಿಕೇಷನ್​ ಇಂಜಿನಿಯರಿಂಗ್​ನಲ್ಲಿ ಅಂತಿಮ ವರ್ಷವನ್ನು ಇತ್ತೀಚಿಗಷ್ಟೇ ಮುಗಿಸಿದ್ದಾರೆ.

ಚಂದನಾ​ ಅವರ ತಂದೆ ಇತ್ತೀಚಿಗೆ ದ್ವಿಚಕ್ರ ವಾಹನ ಚಾಲನೆ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ರು.  ಈ ವೇಳೆ ಅವರ ತಂದೆ ಜೊತೆ ಪ್ರಯಾಣಿಸುತ್ತಿದ್ದ ಚಂದನಾ​ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಆದ್ರೆ ಈ ಘಟನೆ ಅವರಿಗೆ ಆಘಾತವನ್ನುಂಟು ಮಾಡಿತ್ತು. ಕಾರು ಅಪಘಾತಕ್ಕೆ ಒಳಗಾದಾಗ ಏರ್​ಬ್ಯಾಗ್​ ಪ್ರಯಾಣಿಕರ ರಕ್ಷಣೆಗೆ ಸಹಾಯ ಮಾಡುತ್ತದೆ. ಆದರೆ, ದ್ವಿಚಕ್ರವಾಹನದಲ್ಲಿ ಇಂತಹದೊಂದು ಪರಿಹಾರ ಯಾಕೆ ಇಲ್ಲ ಎಂಬುದರ ಬಗ್ಗೆ ಅವರು ಚಿಂತಿಸಿದ್ದಾರೆ.

ಇದನ್ನೂ ಓದಿ: ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ – ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?

ಚಂದನ ತಮ್ಮ ಪ್ರಾಧ್ಯಾಪಕರ ಮಾರ್ಗದರ್ಶನವನ್ನು ಪಡೆದಿದ್ದು, ಪಠ್ಯಗಳನ್ನು ಮೀರಿ ಅವಿಷ್ಕಾರಕ್ಕೆ ಮುಂದಾಗಿದ್ದಾರೆ. ಇವರ ಈ ಆಲೋಚನೆಗೆ ಪೂರಕವಾಗಿ ನಡೆಸಿದ ಕೆಲಸವು ನಿಜ ಜೀವನದಲ್ಲಿ ಫಲ ನೀಡಿದೆ. ಇದೇ ಸಮಯಕ್ಕೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಹ್ಯಾಕಥಾನ್ 5.0 ಬಗ್ಗೆ ತಿಳಿಸಿದರು. ತಮ್ಮ ಅಧ್ಯಾಪಕರ ಮಾರ್ಗದರ್ಶನದೊಂದಿಗೆ, ಅವರು ಅರ್ಜಿ ಸಲ್ಲಿಸಿ, ತಮ್ಮ ಪರಿಕಲ್ಪನೆಯನ್ನು ವಾಸ್ತವಕ್ಕೆ ತರಲು ಮುಂದಾದರು.

ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಸ್ಮಾರ್ಟ್ ವೇರಬಲ್ ಏರ್‌ಬ್ಯಾಗ್ ಸಿಸ್ಟಮ್ ಎಂಬ ಶೀರ್ಷಿಕೆಯ ತಮ್ಮ ಯೋಜನೆ ಮಂಡಿಸಿದರು. ಇದು ಕಾರಿನಲ್ಲಿನ ಏರ್‌ಬ್ಯಾಗ್‌ಗಳಂತೆಯೇ ಬೈಕ್​ಗಳಲ್ಲೂ ರಕ್ಷಣಾತ್ಮಕ ಕಾರ್ಯವಿಧಾನವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ವಿಶೇಷವಾಗಿ ಬೈಕ್ ಸವಾರರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಅಪಘಾತಗಳ ಸಮಯದಲ್ಲಿ ನಿಯೋಜಿಸಲು ಈ ವ್ಯವಸ್ಥೆಯನ್ನು ಉದ್ದೇಶಿಸಲಾಗಿದೆ.

ಅವರ ಈ ಕಲ್ಪನೆಯು ತೀರ್ಪುಗಾರರನ್ನು ಮೆಚ್ಚಿಸಿದ್ದಲ್ಲದೆ, ಕೆಲಸ ಮಾಡುವ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲು ₹12 ಲಕ್ಷ ಅನುದಾನವನ್ನು ಪಡೆಯಲು ಕಾರಣವಾಗಿದೆ. ಈ ನಿಧಿಯು ನನ್ನ ನಾವೀನ್ಯತೆಗೆ ಒಂದು ನಿರ್ದಿಷ್ಟ ಆಕಾರವನ್ನು ನೀಡಲು ಸಹಾಯ ಮಾಡುತ್ತದೆ. ಫಲಿತಾಂಶಗಳು ನಿರೀಕ್ಷೆಗಳನ್ನು ಪೂರೈಸಿದರೆ, ನಾನು ಪೇಟೆಂಟ್ ಪಡೆದು ನನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಆಶಿಸುತ್ತೇನೆ  ಎನ್ನುತ್ತಿದ್ದಾರೆ ಚಂದನಾ.

Kishor KV