ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದಾಗ ವಧು ಕಿಡ್ನ್ಯಾಪ್ – ಪಕ್ಕಾ ಪ್ಲ್ಯಾನ್ ಕಿಡ್ನ್ಯಾಪ್ ಮಾಡಿದ್ನಾ ಲವರ್?

ಮದುವೆಯಾದ ಬಳಿಕ ಪತಿಯೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾಜಿ ಪ್ರಿಯಕರ ಬಂದೂಕು ತೋರಿಸಿ, ನವವಧುವನ್ನು ಅಪಹರಿಸಿರುವ ಘಟನೆ ಒಡಿಶಾದ ಬಲಂಗೀರ್ನಲ್ಲಿ ನಡೆದಿದೆ. ಈ ಕುರಿತು ತರ್ಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರು ತಿಂಗಳ ಹಿಂದೆ ಬಲಂಗೀರ್ ಜಿಲ್ಲೆಯ ಕಾಮಾಖ್ಯನಗರದ ರಿಕು ಪಟೇಲ್ ಮತ್ತು ಬೌಧ್ ಜಿಲ್ಲೆಯ ಕಾಂತಮಲ್ ರಥಪದದ ಯುವತಿಯ ನಡುವೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಶನಿವಾರ ಅವರ ವಿವಾಹ ಜರುಗಿತ್ತು. ಮದುವೆಯಾದ ಬಳಿಕ ಮದುಮಗ ರಿಕು ಭಾನುವಾರ ತನ್ನ ಪತ್ನಿಯೊಂದಿಗೆ ತನ್ನೂರಾದ ಕಾಮಾಖ್ಯನಗರಕ್ಕೆ ಹಿಂತಿರುಗುತ್ತಿದ್ದ.
ಇದನ್ನೂ ಓದಿ: ಹೆಲ್ಮೆಟ್ ಧರಿಸದೆ ಯುವತಿಯರ ಜಾಲಿ ರೈಡ್! – ಯಮರೂಪಿ ಹಂಪ್ಸ್ಗೆ ಕಾಲೇಜು ವಿದ್ಯಾರ್ಥಿನಿ ಬಲಿ!
ಈ ವೇಳೆ ಅವರು ಸಾಗುತ್ತಿದ್ದ ವಾಹನವನ್ನು ಕೆಲ ಯುವಕರ ಗುಂಪು ಸೋನೆಪುರ್ ಜಿಲ್ಲೆಯ ತರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ರಸ್ತೆಯಲ್ಲಿ ತಡೆದಿದ್ದರು. ಏನಾಗುತ್ತಿದೆ ಎಂದು ಅರಿಯುವ ಮೊದಲೇ ಬಂದೂಕನ್ನು ತೋರಿಸಿ ಹೆದರಿಸಿದ್ದು, ನವವಿವಾಹಿತ ವಧುವನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಧುವನ್ನು ಅಪಹರಿಸಿದ್ದು, ಆಕೆಯ ಪ್ರಿಯಕರನಾಗಿದ್ದು, ಆತನೇ ಅಪಹರಿಸಿದ್ದಾನೆ ಎಂದು ಆರೋಪಗಳು ಕೇಳಿಬಂದಿವೆ. ವರನ ಕುಟುಂಬ ಕೂಡ ಇದೇ ರೀತಿ ಆರೋಪಿಸಿದೆ. ಆದರೆ, ಪೊಲೀಸರ ತನಿಖೆಯಲ್ಲಿ ಇದು ಸ್ಪಷ್ಟವಾಗಿಲ್ಲ. ಇದೀಗ ವಧು ಅಪಹರಣದ ಬಳಿಕ ಕಂಗಾಲಾಗಿರುವ ವರನ ಕುಟುಂಬದವರು ವಧುವಿನ ಮನೆಗೆ ದೌಡಾಯಿಸಿ ಮದುವೆಗೆ ಮಾಡಿದ ಸಿದ್ಧತೆ ಮತ್ತು ಚಿನ್ನಾಭರಣದ ಖರ್ಚುಗಳನ್ನೆಲ್ಲಾ ಭರಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ವರನ ಸಹೋದರಿ ಬಿಲಾಸಿನಿ ಪಟೇಲ್, ನನ್ನ ಸಹೋದರನ ಮದುವೆ ಆರು ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಇದಕ್ಕಾಗಿ ನಾವು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ವರನ ಜೊತೆ ವಧು ಬರುವ ವಿಚಾರ ತಿಳಿದು ಬಂದೂಕು, ಶಸ್ತ್ರಾಸ್ತ್ರ ತೋರಿಸಿ ಬೆದರಿಸಿ ವಧುವನ್ನು ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯ ಹಿಂದೆ ವಧುವಿನ ಪಾತ್ರವೂ ಇದೆ. ಈ ಹಿನ್ನೆಲೆ ಮದುವೆಗೆ ನಾವು ಮಾಡಿದ ಎಲ್ಲಾ ಖರ್ಚು, ಚಿನ್ನಾಭರಣಗಳು ಮತ್ತು ಬಟ್ಟೆ ಖರೀದಿಸಿದ ಹಣವನ್ನು ಇದೀಗ ವಧುವಿನ ಮನೆಯವರು ಭರಿಸಬೇಕು. ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಗೆ ಮುಂದಾಗಿದ್ದು, ವಧು ಪತ್ತೆ ಬಳಿಕ ಅಸಲಿ ವಿಚಾರ ಬಯಲಾಗಲಿದೆ ಎಂದಿದ್ದಾರೆ.

ನೋಡಿರಿ

