ಜಾರ್ಖಂಡ್ ಸಿಎಂ ED ಜೊತೆ ಕಣ್ಣಾಮುಚ್ಚಾಲೆ! – 24 ಗಂಟೆಗಳ ಹೈಡ್ರಾಮ ಬಳಿಕ ಹೇಮಂತ್ ಸೊರೇನ್ ರಾಂಚಿಯಲ್ಲಿ ಪತ್ತೆ!

ಜಾರ್ಖಂಡ್ ಸಿಎಂ ED ಜೊತೆ ಕಣ್ಣಾಮುಚ್ಚಾಲೆ! – 24 ಗಂಟೆಗಳ ಹೈಡ್ರಾಮ ಬಳಿಕ ಹೇಮಂತ್ ಸೊರೇನ್ ರಾಂಚಿಯಲ್ಲಿ ಪತ್ತೆ!

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರು ಇಡಿಗೆ ಹೆದರಿ ಕಳೆದ 24 ಗಂಟೆಗಳಿಂದ ನಾಪತ್ತೆಯಾಗಿದ್ದರು. ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಯಾರ ಸಂಪರ್ಕಕ್ಕೂ ಸಿಗ್ತಾ ಇರಲಿಲ್ಲ. ಇಡಿ ಅಧಿಕಾರಿಗಳಿಗೆ ಇದು ತಲೆನೋವಾಗಿ ಪರಿಣಮಿಸಿತ್ತು. ಇಡಿ ಜೊತೆ ಕಣ್ಣಾಮುಚ್ಚಾಲೆ ಆಡ್ತಿದ್ದ ಸಿಎಂ ಸೋರೆನ್‌ ಪತ್ತೆಯಾಗಿದ್ದಾರೆ. ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಸಿಎಂ ಸೋರೆನ್‌ ಕಾಣಸಿಕ್ಕಿದ್ದಾರೆ. ʼ

ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್​ ಅವರು ಈಗ ಭೂ-ಹಗರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಇ.ಡಿ ಅಧಿಕಾರಿಗಳು  ಸಿಎಂ ಹೇಮಂತ್‌ ಸೊರೆನ್​ಗಾಗಿ ಬೆನ್ನುಬಿದ್ದಿದ್ದಾರೆ. ಕಳೆದ ಭಾನುವಾರ ಹೇಮಂತ್ ಸೊರೇನ್ ಅವರು ದಿಲ್ಲಿಯಲ್ಲಿ ಇದ್ದರು. ಆ ಬಳಿಕ ಅವರು ಎಲ್ಲಿಗೆ ಹೋದರು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಸೋಮವಾರದಿಂದ ಸಿಎಂ ಯಾರ ಕೈಗೂ ಸಿಕ್ಕಿರಲಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ಘೋಷಿಸಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಎಲ್ಲಿದ್ದಾರೆ ಅನ್ನೋದೇ ಗೊತ್ತಾಗ್ತಿಲ್ಲ ಎಂದು ಬಿಜೆಪಿ ಹೇಳಿತ್ತು. ಬಿಜೆಪಿ ನಾಯಕರ ಈ ಹೇಳಿಕೆಗಲ ಬೆನ್ನಲ್ಲೇ ಜಾರ್ಖಂಡ್ ಸಿಎಂ ಹೇಮಂತ್ ಕಾಣ ಸಿಕ್ಕಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹೇಮಂತ್ ಸೊರೇನ್ ಕಾಣಿಸಿಕೊಂಡರು. ತಮ್ಮ ಮನೆಯಲ್ಲಿ ಶಾಸಕರ ಜೊತೆ ಹೇಮಂತ್ ಸೊರೇನ್ ಸಭೆ ನಡೆಸುತ್ತಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಖುರೇಷಿಗೆ 10 ವರ್ಷ ಜೈಲು ಶಿಕ್ಷೆ!

ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಸಾರಥ್ಯದ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಮಹಾ ಘಟಬಂಧನ ಮೈತ್ರಿ ಸರ್ಕಾರವಿದೆ. ಕಳೆದ ಭಾನುವಾರ ಜಾರ್ಖಂಡ್ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಯ್ತು. ದಿಲ್ಲಿಯಲ್ಲಿ ಇರುವ ಹೇಮಂತ್ ಸೊರೇನ್ ನಿವಾಸದ ಬಳಿ ನಿಲ್ಲಿಸಿದ್ದ ಸೊರೇನ್ ಅವರ ಬಿಎಂಡಬ್ಲ್ಯೂ ಕಾರಿನಲ್ಲಿ ಇಡಿ ಅಧಿಕಾರಿಗಳಿಗೆ 36 ಲಕ್ಷ ರೂಪಾಯಿ ನಗದು ಹಣ ಸಿಕ್ಕಿತ್ತು. ಈ ಹಣದ ಮೂಲವೇನು ಎಂದು ವಿಚಾರಿಸಲು ಇಡಿ ಅಧಿಕಾರಿಗಳು ಹೇಮಂತ್ ಸೊರೇನ್ ಅವರ ದಿಲ್ಲಿ ನಿವಾಸ ಹಾಗೂ ದಿಲ್ಲಿಯ ಜಾರ್ಖಂಡ್ ಭವನದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಸೊರೇನ್ ಎಲ್ಲಿಯೂ ಸಿಕ್ಕಿರಲಿಲ್ಲ.

ಹೀಗಾಗಿ, ಹೇಮಂತ್ ಸೊರೇನ್ ಪರಾರಿಯಾಗಿದ್ದಾರೆ, ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಜೊತೆಯಲ್ಲೇ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಹೇಮಂತ್ ಸೊರೇನ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪತ್ನಿಯನ್ನು ಸಿಎಂ ಮಾಡಬಹುದು ಅನ್ನೋ ವದಂತಿಗಳೂ ಹರಿದಾಡ್ತಿವೆ. ಭಾನುವಾರ ಸಂಜೆ ಹೊತ್ತಿಗೆ ಹೇಮಂತ್ ಸೊರೇನ್ ನಾಪತ್ತೆಯಾದ ಬಳಿಕ ಅವರನ್ನು ಹುಡುಕಿ ಕೊಟ್ಟವರಿಗೆ, ಸುಳಿವು ನೀಡಿದವರಿಗೆ 11 ಸಾವಿರ ರೂ. ಬಹುಮಾನ ನೀಡೋದಾಗಿ ಜಾಹೀರಾತು ನೀಡಿದ್ದ ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮುರಾಂಡಿ ಅವರು ಲೇವಡಿ ಮಾಡಿದ್ದರು.

ಇದೀಗ ಶಾಸಕರ ಜೊತೆ ಸಭೆ ನಡೆಸುವ ಮೂಲಕ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ತಾವು ಎಲ್ಲಿದ್ದೇವೆ ಅನ್ನೋ ಸಂದೇಶ ರವಾನಿಸಿದ್ದಾರೆ. ಜೆಎಂಎಂ ನಾಯಕರು ಹಾಗೂ ಮಿತ್ರ ಪಕ್ಷ ಕಾಂಗ್ರೆಸ್‌ನ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹೇಮಂತ್ ಸೊರೇನ್ ನಾಪತ್ತೆಯಾಗಿದ್ದಾರೆ ಅನ್ನೋ ವದಂತಿ ಹರಡಿ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತ ಜಾರ್ಖಂಡ್ ರಾಜ್ಯಪಾಲ ಸಿ. ಪಿ. ರಾಧಾಕೃಷ್ಣನ್ ಅವರೂ ಕೂಡಾ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರೋದಾಗಿ ಹೇಳಿದ್ದಾರೆ.

Shwetha M