ನನಗೆ ತಿಳಿಸದೇ ಬಿಜೆಪಿ ಜತೆ ಕುಮಾರಸ್ವಾಮಿ ಮೈತ್ರಿ – ಅ. 16ರಂದು ಗಟ್ಟಿ ನಿರ್ಧಾರ ಪ್ರಕಟಿಸೋದಾಗಿ ಸಿ.ಎಂ ಇಬ್ರಾಹಿಂ ಬಾಂಬ್
ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಎರಡೂ ಪಕ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈಗಾಗಲೇ ಹಲವರು ಪಕ್ಷಾಂತರ ಮಾಡಿದ್ದಾರೆ. ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಂತೆ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಇಬ್ರಾಹಿಂ ಗಟ್ಟಿ ನಿರ್ಧಾರ ತೆಗೆದುಕೊಳ್ಳೋದಾಗಿ ಜೆಡಿಎಸ್ ಗೆ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ ಇಬ್ಬರು ಮಾಜಿ ಶಾಸಕರು – ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಬಿಗ್ ಶಾಕ್
ಮಾಜಿ ಪ್ರಧಾನಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರ್ ಜೊತೆ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಮೈತ್ರಿ ಡೀಲ್ ಕುದುರಿಸಿಕೊಂಡು ಬಂದಿದ್ದರು. ಇದು ಜೆಡಿಎಸ್ ಪಾಳಯದಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಗರಂ ಆಗಿದ್ದಾರೆ. ನನಗೆ ತಿಳಿಸದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆಗೆ ಮೈತ್ರಿ ನಿರ್ಧಾರ ಮಾಡಿದ್ದು, ನನಗೆ ಬೇಸರ ಉಂಟು ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾಗಿ 3 ನೇ ಶಕ್ತಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 16 ರಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ. ಶನಿವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ನನಗೆ ಅಕ್ಟೋಬರ್ 16 ರವರೆಗೆ ಅವಕಾಶ ಬೇಕು. ಎಲ್ಲರ ಅಭಿಪ್ರಾಯ ಪಡೆದು ನಾನು ಮಾಧ್ಯಮದ ಮುಂದೆ ಬರ್ತೀನಿ ಎಂದು ತಿಳಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ನಿಮ್ಮ ಬಳಿ ಮಾತಾಡಿದ್ದಾರೆ. ಹಾಗಾಗಿ ಇದುವರೆಗೂ ನಾನು ಕುಮಾರಸ್ವಾಮಿ ಬಳಿ ಮಾತಾಡಿಲ್ಲ. ಕುಮಾರಸ್ವಾಮಿ ನನ್ನ ಸಹೋದರ ಸಮಾನ, ದೇವೇಗೌಡರು ನನ್ನ ತಂದೆ ಸಮಾನ. ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ಹೇಳಿಲ್ಲ. ಏನು ಚರ್ಚೆ ಮಾಡಿದ್ರಿ ಅಂತನೂ ಹೇಳಲಿಲ್ಲ. ಅಕ್ಟೋಬರ್ 16 ರಂದು ನಾನು ಜನರ ಬಳಿ ಅಭಿಪ್ರಾಯ ಪಡೆದು ಬರ್ತೀನಿ. ಪಕ್ಷದಲ್ಲಿ ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಅಕ್ಟೋಬರ್ 16 ರಂದು ಸಮಾನ ಮನಸ್ಕರು ಸಭೆ ಕರೆದಿದ್ದೇನೆ. ಈ ಬಾರಿ 20 ಪರ್ಸೆಂಟ್ ವೋಟ್ ಜೆಡಿಎಸ್‌ಗೆ ಸಿಕ್ಕಿದೆ. ಮುಸ್ಲಿಂ ಮತ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದ್ರು. ಆದರೆ, ಬಿಜೆಪಿ ಸೋಲಿಸಲು ಮತ ಹಾಕಿದ್ರು ಅಂದ್ರು, ಒಟ್ಟಾರೆ ಮತ ಹಾಕಿದ್ದಾರಲ್ವಾ? ಎಂದು ಪ್ರಶ್ನಿಸಿದರು.
ಯಾವುದೇ ನಿರ್ಧಾರ ಆಗಬೇಕು ಅಂದರೆ, ಪಕ್ಷದಲ್ಲಿ ಚರ್ಚೆ ಆಗಬೇಕಲ್ವಾ? ಇವತ್ತಿನವರೆಗೂ ನನ್ನ ಸಹಿ ಇಲ್ಲದೆ ಯಾವ ಪೇಪರ್ ಹೊರ ಬಂದಿದೆ? ಕೋರ್ ಕಮಿಟಿ ಪ್ರವಾಸ ಆದ ನಂತರ ಮುಂದಿನ ತೀರ್ಮಾನ ಅಂದ್ರು. ಆದರೆ, ಮೊದಲೇ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಆಗಿ ಬಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ಜೊತೆ ಕಾಂಗ್ರೆಸ್‌ನವರೂ ಸಂಪರ್ಕದಲ್ಲಿ ಇದ್ದಾರೆ. ಏನೇ ಮಾಡಬೇಕು ಅಂದ್ರು ನಾನು ದೇವೇಗೌಡರ ಬಳಿ ಮಾತಾಡಿಯೇ ಹೋಗೋದು. ದೆಹಲಿಯ ಬೇರೆ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಶರತ್ ಪವಾರ್ ಮಾತಾಡಿದ್ದಾರೆ, ಆಪ್ ಅವರೂ ಮಾತಾಡಿದ್ದಾರೆ. ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಜೊತೆ ಮಾತಾಡಿಯೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಮಗೆ ಮೈತ್ರಿ ಬೇಕಾಗಿಲ್ಲ ಅಂತ ದೇವೇಗೌಡರೇ ಹೇಳಿದ್ದು. ಕುಮಾರಸ್ವಾಮಿ ಅವರು ಹೋಗಿ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದು ನೋವಾಗಿದೆ. ನನ್ನ ಬಳಿ ಒಂದು ಮಾತಾಡಿ ಹೋಗಿದ್ದರೆ ಏನಾಗ್ತಾ ಇತ್ತು? ಕುಮಾರಸ್ವಾಮಿ ಅವರು ಪ್ರಯತ್ನ ಪಟ್ಟಿದ್ದಾರೆ ನನ್ನ ಜೊತೆ ಮಾತಾಡೋಕೆ? ಜನತಾ ದಳ ಹಿಂದು, ಮುಸ್ಲಿಂ ಪಾರ್ಟಿ ಅಲ್ಲ ಬದಲಾಗಿ ಕರ್ನಾಟಕ ಜನತೆಯ ಪಾರ್ಟಿ ಇದು ಎಂದರು.