ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲು!: ಐಟಿ ರೇಡ್‌ ಬಗ್ಗೆ ಜೆಡಿಎಸ್‌ ಲೇವಡಿ

ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲು!: ಐಟಿ ರೇಡ್‌ ಬಗ್ಗೆ ಜೆಡಿಎಸ್‌ ಲೇವಡಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್‌ ಏಜೆಂಟ್‌ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್‌ ಅಂಬಿಕಾಪತಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಅಂಬಿಕಾಪತಿ ಅವರ ಸಂಬಂಧಿಕರ ಮನೆಯಲ್ಲಿ  ಬರೋಬ್ಬರಿ 42 ಕೋಟಿ ರೂ. ಸಿಕ್ಕಿದೆ. ಇದೀಗ ಈ ಬಗ್ಗೆ ಜೆಡಿಎಸ್‌ ಕಿಡಿಕಾರಿದೆ. ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ! ಅದೂ ಮಂಚದ ಕೆಳಗೆ!! ಎಂದು ಜೆಡಿಎಸ್‌ ಲೇವಡಿ ಮಾಡಿದೆ.

ಈ  ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ! ಅದೂ ಮಂಚದ ಕೆಳಗೆ!! ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ನ ಸಭೆಯಲ್ಲಿ ಕ್ಯಾಂಡಿಕ್ರಶ್‌ ಆಡುತ್ತಾ ಕುಳಿತ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​!

ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು? ಎಂದು ಪ್ರಶ್ನಿಸಿದೆ.

23 ಬಾಕ್ಸ್ ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್ ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪರ್ಸಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು?‌ ಈಗ ಹೇಳಿ ಸನ್ಮಾನ್ಯ ಸಿದ್ದರಾಮಯ್ಯನವರೇ.. 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು..? ದಯಮಾಡಿ ಹೇಳಿ ಎಂದು ಪ್ರಶ್ನಿಸಿದೆ.

ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ‘ ಕೈ ‘ ಚಳಕ ಜೋರಾಗಿದೆ. ಪಂಚರಾಜ್ಯಗಳ ಪಾಲಿಕೆ ಕರ್ನಾಟಕ ಸಮೃದ್ಧ ಎಟಿಎಂ!! ಕಾವೇರಿ ನೀರು  ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ!! ಆದಿಯಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ. ಕರ್ನಾಟಕಕ್ಕೆ_ಕಾಂಗ್ರೆಸ್_ಕನ್ನ ಎಂದು ಹ್ಯಾಶ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದೆ.

Shwetha M