ರಾಜೀನಾಮೆ ಕೊಡಿ.. ಚುನಾವಣೆಗೆ ಸ್ಪರ್ಧಿಸೋಣ! – ಸಿಎಂ ಸಿದ್ಧರಾಮಯ್ಯಗೆ ಜಿ.ಟಿ ದೇವೇಗೌಡ ಸವಾಲು

ರಾಜೀನಾಮೆ ಕೊಡಿ.. ಚುನಾವಣೆಗೆ ಸ್ಪರ್ಧಿಸೋಣ! – ಸಿಎಂ ಸಿದ್ಧರಾಮಯ್ಯಗೆ ಜಿ.ಟಿ ದೇವೇಗೌಡ ಸವಾಲು

ಲೋಕಸಭೆ ಚುನಾವಣೆಗೆ ಕೌಂಟ್‌ ಡೌನ್‌ ಶುರುವಾಗಿದೆ. ಒಂದ್ಕಡೆ ಪ್ರಚಾರದ ಕಾವು ಜೋರಾಗಿದ್ದರೆ ಮತ್ತೊಂದು ಕಡೆ ಆರೋಪ – ಪ್ರತ್ಯಾರೋಪ ನಡೆಯುತ್ತಿದೆ. ಜೆಡಿಎಸ್​ ಮುಖಂಡ, ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಪರಸ್ಪರ ಕಿಡಿಕಾರುತ್ತಲೇ ಇದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾನೆ. ಆದರು ಏನು ಕಡಿದು ಕಟ್ಟೆಹಾಕಿದ್ದಾನೆ ಅಂತ ಹೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಸಿದ ಶಾಸಕ ಜಿಟಿ ದೇವೇಗೌಡ, ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಬನ್ನಿ ಇಬ್ಬರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲೋಣ. ಯಾರು ಗೆಲುತ್ತಾರೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ತೈವಾನ್‌ನಲ್ಲಿ ಪ್ರಬಲ ಭೂಕಂಪ –  ಹಲವು ಕಟ್ಟಡಗಳು ನೆಲಸಮ, ಸುನಾಮಿ ಎಚ್ಚರಿಕೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿ.ಟಿ. ದೇವೇಗೌಡ,  ಅಭಿವೃದ್ಧಿ ಅಂದರೆ ಏನೂ ಅಂತ ಗೊತ್ತಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಅದಕ್ಕಾಗಿ ಆಗ ನೀವು ಗೆದ್ದರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ಟಿದ್ದೀರಿ. ನನ್ನ ಕಾಯೋಕೆ ದೈವವಿದೆ, ಧರ್ಮವಿದೆ. ಅದು ಹೇಗೆ ನೀವು ನನ್ನನ್ನು ಸೋಲಿಸ್ತಿರಿ. ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯ್ತು. ಯಾಕೆ ಪದೇ ಪದೇ ಹೀಗೆ ಮಾತಾಡುತ್ತೀರಿ ಎಂದು ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಬಿಇಒ, ತಹಶಿಲ್ದಾರರ ಎಲ್ಲ ಸಿಎಂ ಬಂಧುಗಳು. ಎಷ್ಟು ದಿನ ಮುಖ್ಯಮಂತ್ರಿಗಳಾಗಿರುತ್ತೀರಿ? ನೋಡೋಣ. ಎಷ್ಟು ನೋವು ಕೊಡುತ್ತಿದ್ದೀರಿ ನೀವು ನನಗೆ. ಪದೇ ಪದೇ ಬಂದು ಯಾಕೆ ರೀತಿ ಚುಚ್ಚಿ ಮಾತಾಡುತ್ತೀರಿ? ಮೌನವಾಗಿ ಮರ್ಯಾದೆಯಿಂದ ಇರಿ. 35 ಸಾವಿರ ಅಂತರದಿಂದ ನಾನು ನಿಮ್ಮನ್ನು ಸೋಲಿಸಿದಾಗಲೂ ನಾನು ನಿಮ್ಮ ಬಗ್ಗೆ ಅಗೌರವದಿಂದ ಮಾತಾಡಿಲ್ಲ. ಹೆಸರಿಗೆ ನಾನು ಶಾಸಕ. ಚಾಮುಂಡೇಶ್ವರಿಯಲ್ಲಿ ಎಲ್ಲ ನಿಮ್ದೆ ಎಂದು ಬೇಸರ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಕಮೀಷನ್ ಅನ್ನು ನಿಮ್ಮ ಪುತ್ರನಿಗೆ ಕೊಡಬೇಕು. ಯತೀಂದ್ರ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ಕಮೀಷನ್ ದಂಧೆ ಮಾಡುತ್ತಿದ್ದಾರೆ. ವರುಣದಲ್ಲಿ ನೀವು ಬಿಜೆಪಿಯ ದೊಡ್ಡವರ ಬೆಂಬಲ ಪಡೆದು ಗೆದ್ದಿಲ್ವಾ? ಸಿದ್ದರಾಮಯ್ಯ ಸರ್ಕಾರದಲ್ಲಿ 60% ಕಮಿಷನ್​​​​ ಕೇಳುತ್ತಾರೆ ಎಂದು ಆರೋಪಿಸಿದರು.

Shwetha M